ಭಟ್ಕಳ: ಭಾರೀ ಮಳೆಗೆ ಘಮಘಮಿಸುವ ಭಟ್ಕಳ ಮಲ್ಲಿಗೆ ಹೂವಿನ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಹೂವು ಪೂರೈಕೆ ಆಗದೇ ಇರುವುದರಿಂದ ಮಲ್ಲಿಗೆ ದರ ಮೊಳವೊಂದಕ್ಕೆ ₹೨೦೦ ಗಡಿ ದಾಟುವಂತಾಗಿದೆ.
ಪ್ರಸ್ತುತ ಮಲ್ಲಿಗೆಗೆ ಇಷ್ಟೊಂದು ದರ ಏರಿಕೆಯಾದರೂ ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರೀ ಹೊಡೆತ ಬಿದ್ದಿದೆ. ಬೆಳೆಗಾರರು ಮಲ್ಲಿಗೆ ಗಿಡಕ್ಕೆ ಸಾವಿರಾರು ರುಪಾಯಿ ಖರ್ಚು ಮಾಡಿ ಹಾಕಿದ ಗೊಬ್ಬರ, ಪೋಷಕಾಂಶ, ಔಷಧಿ ಎಲ್ಲವೂ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ.
ಈ ಸಲವೂ ಕಳೆದ ವರ್ಷದಂತೆ ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮಲ್ಲಿಗೆಗೆ ಉತ್ತಮ ಬೆಲೆ ಇದ್ದಾಗ ಬೆಳೆ ಇಲ್ಲ ಎನ್ನುವಂತಾಗಿದೆ. ತಾಲೂಕಿನಲ್ಲಿ ಸಾವಿರಾರು ಕುಟುಂಬ ಮಲ್ಲಿಗೆ ಬೆಳೆಯನ್ನು ಬೆಳೆಯುತ್ತಿದ್ದು, ಹೆಚ್ಚಿನವರು ಇದನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದಾರೆ.ಸರ್ಕಾರದಿಂದ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸಿಕ್ಕೀತೆ ಎನ್ನುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಗಿಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಡದೇ ಇರುವುದರಿಂದ ಸಹಜವಾಗಿ ಮಾರುಕಟ್ಟೆಗೆ ಮೊದಲಿನ ಪ್ರಮಾಣದಲ್ಲಿ ಮಲ್ಲಿಗೆ ಬರುತ್ತಿಲ್ಲ. ಹೀಗಾಗಿಯೇ ಮಲ್ಲಿಗೆಗೆ ದಿಢೀರ್ ದರ ಏರಿಕೆಗೆ ಕಾರಣವಾಗಿದೆ.