ಸೊಳ್ಳೆ ಉತ್ಪತ್ತಿ ತಾಣ ಭಟ್ಕಳದ ಚರಂಡಿ!

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ಪುರಸಭೆ ಚರಂಡಿಯಲ್ಲಿ ಕೊಳಕು ನೀರು ಹರಿಯದಂತೆ, ತ್ಯಾಜ್ಯ ರಾಶಿ ಬೇಕಾಬಿಟ್ಟಿ ಬೀಳದಂತೆ ಗಮನ ಹರಿಸುವ ಜತೆಗೆ ಎಲ್ಲೆಡೆ ಕಡ್ಡಾಯವಾಗಿ ಫಾಗಿಂಗ್ ನಡೆಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಭಟ್ಕಳ:

ಪಟ್ಟಣದ ಹೃದಯ ಭಾಗವಾದ ಸಂಶುದ್ದೀನ ವೃತ್ತ, ಸಾಗರ ರಸ್ತೆ ಮುಂತಾದ ಕಡೆ ಚರಂಡಿಯಲ್ಲಿ ಕೊಳಕು ನೀರು ಹರಿಯುತ್ತಿದ್ದು ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ. ಇದರಿಂದ ಡೇಂಘಿ ಹೆಚ್ಚಾಗುವ ಭೀತಿ ಸಾರ್ವಜನಿಕರು ಕಾಡುತ್ತಿದೆ.

ಪಟ್ಟಣದ ವಿವಿಧೆಡೆ ಚರಂಡಿಯಲ್ಲಿ ಕೊಳಕು ನೀರು ಹರಿಯುತ್ತಿದ್ದು, ಸಂಜೆಯಾದರೆ ಸೊಳ್ಳೆ ಕಾಟ ಆರಂಭವಾಗುತ್ತದೆ. ಹೃದಯ ಭಾಗವಾದ ಸಂಶದ್ದೀನ್‌ ವೃತ್ತದಲ್ಲಿನ ಚರಂಡಿಯಲ್ಲಿ ಬಾಟಲಿ, ಕಸ, ತ್ಯಾಜ್ಯ ತುಂಬಿದ್ದರೂ ಪುರಸಭೆ ಅದನ್ನು ಸ್ವಚ್ಛಗೊಳಿಸದೆ ಹಾಗೇ ಕುಳಿತಿದೆ.ಸೊಳ್ಳೆಗಳ ತಾಣ ನಿರ್ಮೂಲನೆ ಮಾಡಿ:ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಡೇಂಘಿ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಮಾವಿನಕುರ್ವೆ ಬಂದರಿನಲ್ಲಿ ಓರ್ವ ಯುವಕ ಮತ್ತು ಖಾಜೀಯಾ ಸ್ಟ್ರೀಟ್‌ನಲ್ಲಿ 77 ವರ್ಷದ ವೃದ್ಧರೊಬ್ಬರು ಡೇಂಘಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಬಳಿಕ ಎಲ್ಲರೂ ಡೇಂಘಿ ಎಂದರೆ ಭಯಬೀಳುವಂತಾಗಿದೆ. ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ಡೇಂಘಿ ಮತ್ತಿತರ ಜ್ವರ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ಜ್ವರಪೀಡಿತ ಪ್ರದೇಶಗಳಲ್ಲಿ ರೋಗ ನಿಯಂತ್ರಣಕ್ಕಾಗಿ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಹಾಯಕ ಆಯುಕ್ತರು ಸಭೆಗಳ ಮೇಲೆ ಸಭೆ ನಡೆಸಿ ಡೇಂಘಿ ಪ್ರಕರಣದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಪಟ್ಟಣದಲ್ಲಿ ಸೊಳ್ಳೆ ಉತ್ಪತ್ತಿ ತಾಣವನ್ನು ಮೊದಲು ನಿರ್ಮೂಲನೆ ಮಾಡಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.ಸಿಬ್ಬಂದಿಗೆ ಸ್ಪಂದಿಸಿ:ಪುರಸಭೆ ಚರಂಡಿಯಲ್ಲಿ ಕೊಳಕು ನೀರು ಹರಿಯದಂತೆ, ತ್ಯಾಜ್ಯ ರಾಶಿ ಬೇಕಾಬಿಟ್ಟಿ ಬೀಳದಂತೆ ಗಮನ ಹರಿಸುವ ಜತೆಗೆ ಎಲ್ಲೆಡೆ ಕಡ್ಡಾಯವಾಗಿ ಫಾಗಿಂಗ್ ನಡೆಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ತಾಲೂಕಿನ ವಿವಿಧ ಭಾಗಗಳಲ್ಲಿ ಜ್ವರ, ಕೆಮ್ಮು ಮುಂತಾದವುಗಳು ವ್ಯಾಪಕವಾಗಿದ್ದು, ಆರೋಗ್ಯ ಇಲಾಖೆ ಮನೆ-ಮನೆ ಸರ್ವೇ ನಡೆಸುತ್ತಿದ್ದರೂ ಆರೋಗ್ಯ ಸಿಬ್ಬಂದಿಗೆ ಜನರೂ ಸಹ ಸ್ಪಂದಿಸಬೇಕಿದೆ.

Share this article