ಕಂಪ್ಲಿ: ಪಟ್ಟಣದ ಜನತೆಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪಕ್ಷ ಭೇದ ತೊರೆದು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ತಿಳಿಸಿದರು.
ಫಾರಂ ನಂ.3 ವಿಚಾರ ಕುರಿತು ಸಾರ್ವಜನಿಕರು ನಿತ್ಯ ಪುರಸಭೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು, ಸರಳ ರೀತಿಯಲ್ಲಿ ಹಾಗೂ ನಿಗದಿತ ಸಮಯದಲ್ಲಿ ಫಾರಂ ನಂ.3ನ್ನು ಮನೆ ಬಾಗಿಲಿಗೆ ತಲುಪಿಸುವ ಕುರಿತು ಕ್ರಮ ಜರುಗಿಸಲಾಗುವುದು. ಪಟ್ಟಣದಲ್ಲಿ ಬಾಕಿ ಉಳಿದಿರುವ ರಸ್ತೆ ಅಗಲೀಕರಣದ ವಿಚಾರ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಟ್ರಾಫಿಕ್ ಉಂಟಾಗದಂತೆ ಸುಗಮ ಸಂಚಾರಕ್ಕೆ ಜನರಿಗೆ ಅನುಕೂಲತೆ ಕಲ್ಪಿಸಲಾಗುವುದು. ಪುರಸಭೆ ಜಾಗದಲ್ಲಿರುವಂತಹ ಬಿಎಸ್ವಿ ಶಾಲೆಯನ್ನು ಏಪ್ರಿಲ್ ಒಳಗಾಗಿ ಬೇರೆಡೆ ವರ್ಗಾಯಿಸಿಕೊಳ್ಳಲು ಆಡಳಿತ ಮಂಡಳಿಯವರಿಗೆ ತಿಳಿಸಿದ್ದು, ಶಾಲೆ ವರ್ಗಾವಣೆಗೊಂಡ ಕೂಡಲೇ ಅ ಜಾಗದಲ್ಲಿ ನೂತನ ಮಳಿಗೆಗಳನ್ನು ನಿರ್ಮಿಸಲಾಗುವುದು. ಈಗಿರುವ ಪುರಸಭೆ ಕಟ್ಟಡ ನವೀಕರಣದ ಕುರಿತಾಗಿಯೂ ಶಾಸಕರೊಂದಿಗೆ ಚರ್ಚಿಸಿ ನೂತನ ಕಟ್ಟಡ ನಿರ್ಮಾಣ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಜೆ.ಎನ್. ಗಣೇಶ್, ಪುರಸಭೆ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಕೆ.ಎಸ್. ಚಾಂದ್ ಬಾಷಾ, ಎಂ. ಉಸ್ಮಾನ್, ವೀರಾಂಜನೇಯಲು, ಪಿ.ಮೌಲಾ, ಲಡ್ಡು ಹೊನ್ನೂರ್ ವಲಿ, ಗುಡದಮ್ಮ, ನಾಗಮ್ಮ, ಜಿ.ಸುಮಾ ಇದ್ದರು.