ಶಿಕಾರಿಪುರ: ಪ್ರಜಾಪ್ರಭುತ್ವ ದೇಶದಲ್ಲಿ ಕೋಮುವಾದಿ ಸಂಘಟನೆಗಳ ವಿರುದ್ಧ ಸಂವಿಧಾನದ ಉಳಿವಿಗಾಗಿ ನ.1ರಂದು ಭೀಮ್ ಆರ್ಮಿ ಸಹಿತ ವಿವಿಧ ಸಂಘಟನೆಗಳ ವತಿಯಿಂದ ತಾಲೂಕಿನ ಶಿರಾಳಕೊಪ್ಪ ಭೀಮಾ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾ.ದಲಿತ ಸಂಘರ್ಷ ಸಮಿತಿ ಸಂಚಾಲಕ ಜಗದೀಶ್ ಚುರ್ಚುಗುಂಡಿ ತಿಳಿಸಿದರು.
ನೋಂದಣಿಯಾಗದ ರಾಸ್ವಂಸೇ ಸಂಘದ ಕಾರ್ಯಕರ್ತರಿಗೆ ಪಥಸಂಚಲನಕ್ಕೆ ಶಿರಾಳಕೊಪ್ಪದಲ್ಲಿ ಇದೇ ನ.1 ರಂದು ತಾಲೂಕು ಆಡಳಿತ ನೀಡಿದ ಅನುಮತಿಯನ್ನು ವಾಪಾಸ್ ಪಡೆಯಬೇಕು. ನೀಲಿ ಶಾಲು, ಬಾವುಟ, ಕೋಲು, ಸಮವಸ್ತ್ರದ ಭೀಮ್ ಆರ್ಮಿ ಪಥಸಂಚಲನಕ್ಕೆ ಅದೇ ವೇಳೆ, ಮಾರ್ಗದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡಬೇಕು. ಸಂವಿಧಾನ ಉಳಿವಿಗಾಗಿ ಹಮ್ಮಿಕೊಳ್ಳಲಾದ ಪಥಸಂಚಲನಕ್ಕೆ ಗುರುಮೂರ್ತಿ ಆಗಮಿಸುತ್ತಿದ್ದು ಸಂವಿಧಾನ ಗೌರವಿಸುವ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.ಅಹಿಂದಾ ಹೋರಾಟಗಾರ ರಾಘವೇಂದ್ರ ನಾಯ್ಕ ಮಾತನಾಡಿ, ಶಿರಾಳಕೊಪ್ಪದ ರಾ.ಸ್ವಂ.ಸೇ ಸಂಘದ ಪಥಸಂಚಲನದಲ್ಲಿ ಖುದ್ದು ಸಂಸದರು, ಶಾಸಕರು ಪಾಲ್ಗೊಳ್ಳುತ್ತಿದ್ದು ತಾಲೂಕಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣಕ್ಕೆ ನೇತೃತ್ವ ವಹಿಸುತ್ತಿರುವುದು ವಿಪರ್ಯಾಸ ಎಂದ ಅವರು, ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳದಲ್ಲಿ ಸಂಘದ ಚಟುವಟಿಕೆಗೆ ಅನುಮತಿ ಅಗತ್ಯ ಎಂದ ಸಚಿವ ಪ್ರಿಯಾಂಕ ರವರ ತೇಜೋವಧೆಯನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ. ಶಿರಾಳಕೊಪ್ಪದಲ್ಲಿ ಕಾನೂನು ಮೀರಿ ಅನುಮತಿ ನೀಡಿದಲ್ಲಿ ತೀವ್ರವಾಗಿ ವಿರೋಧಿಸುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಆದಿಜಾಂಬವ ಸಮಾಜದ ಅಧ್ಯಕ್ಷ ನಿಂಗಪ್ಪ, ಅಂಬಾರಗೊಪ್ಪ ಗ್ರಾ.ಪಂ ಅಧ್ಯಕ್ಷ ಮಂಜಾನಾಯ್ಕ, ಸಾಲೂರು ಗ್ರಾ.ಪಂ ಅಧ್ಯಕ್ಷ ಹನುಮಂತನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಯ್ಕ, ಕಾರ್ಮಿಕ ಘಟಕದ ಅಧ್ಯಕ್ಷ ಸುನೀಲ್ ಬನ್ನೂರು, ಪುನೀತ್ ನಾಯ್ಕ, ಸಮೀರ್ ಮತ್ತಿತರರಿದ್ದರು.