ಭೀಮಾ ತೀರಾ: ಸಲೂನ್‌ಗೆ ನುಗ್ಗಿ ಗ್ರಾಪಂ ಅಧ್ಯಕ್ಷನ ಬರ್ಬರವಾಗಿ ಕೊಲೆಗೈದರು!

KannadaprabhaNewsNetwork |  
Published : Sep 04, 2025, 01:00 AM IST
ಹತ್ಯೆ | Kannada Prabha

ಸಾರಾಂಶ

ಭೀಮಾ ತೀರದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಭೀಕರ ಹತ್ಯೆ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ರೌಡಿಶೀಟರ್‌, ಮಹಾದೇವ ಭೈರಗೊಂಡ ಪರಮಾಪ್ತನೂ ಆಗಿದ್ದ ಭೀಮನಗೌಡ ಬಿರಾದಾರ್‌ (42) ಮೇಲೆ ಮೂರ್ನಾಲ್ಕು ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಡಚಣ

ಭೀಮಾ ತೀರದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಭೀಕರ ಹತ್ಯೆ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ರೌಡಿಶೀಟರ್‌, ಮಹಾದೇವ ಭೈರಗೊಂಡ ಪರಮಾಪ್ತನೂ ಆಗಿದ್ದ ಭೀಮನಗೌಡ ಬಿರಾದಾರ್‌ (42) ಮೇಲೆ ಮೂರ್ನಾಲ್ಕು ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಾವೇ ಕೃತ್ಯ ಎಸಗಿದ್ದೇವೆ ಎಂದು ಹೇಳಿಕೊಂಡು ರಜೀವುಲ್ಲಾ ಮಕಾನದಾರ್, ವಸೀಂ ಮಣಿಯಾರ್, ಫಿರೋಜ್ ಅವರಾದ್, ಮೌಲಾಲಿ ಲಾಡೇಸಾಬ್ ಚೋರಗಿ ನಂತರ ಆರೋಪಿಗಳೆಲ್ಲರೂ ಚಡಚಣ ಠಾಣೆಗೆ ತೆರಳಿ ಶರಣಾಗಿದ್ದಾರೆ. ರಾಜಕೀಯ ದ್ವೇಷಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ.

ಘಟನೆ ಹೇಗೆ ನಡೆಯಿತು?:

ಭೀಮನಗೌಡ ಬುಧವಾರ ಬೆಳಗ್ಗೆ ಗ್ರಾಪಂ ಕಚೇರಿ ಬಳಿಯಿರುವ ಸಲೂನ್‌ನಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾಗ ಏಕಾಏಕಿ ದಾಳಿ ನಡೆಸಿರುವ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ತಲೆಗೆ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ. ಆತ ಚೇರ್‌ ಮೇಲೆಯೇ ಕುಸಿದು ಬಿದ್ದಿದ್ದು, ನಾಡ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ತಗುಲಿ ಭೀಮನಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಸಹಸ್ರಾರು ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹ ನೋಡಲು ಬಂದ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

--

ಭೀಕರ ಹತ್ಯೆಗೆ ಕಾರಣವೇನು?

ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಒಂದು ಬಾರಿ ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದ ಭೀಮನಗೌಡ, ಈಗ ಸತತ ಎರಡನೇ ಬಾರಿ ಗ್ರಾಪಂ ಅಧ್ಯಕ್ಷನಾಗಿದ್ದ. ಇದೇ ಡಿಸೆಂಬರ್‌ನಲ್ಲಿ ಅಧಿಕಾರಾವಧಿ ಮುಗಿಯಲಿದ್ದು, ಮತ್ತೆ ಚುನಾವಣೆ ನಡೆದರೇ, ಆತನೇ ಅಧ್ಯಕ್ಷನಾಗುತ್ತಾನೆ. ಇಲ್ಲದಿದ್ದರೆ ಆತ ತನ್ನ ಆಪ್ತನನ್ನು ಅಧ್ಯಕ್ಷ ಗಾದಿಗೆ ಕೂಡಿಸುತ್ತಾನೆ ಎಂದು ಭಾವಿಸಿ ಆರೋಪಿತರು ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಭೀಮನಗೌಡ 2017ರಲ್ಲಿ ಕೊಂಕಣಗಾಂವ ಗ್ರಾಮದಲ್ಲಿ ನಡೆದ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಎ8 ಆರೋಪಿಯಾಗಿದ್ದ. ಈತ ಸುಮಾರು ಒಂದು ವರ್ಷ ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರಬಂದಿದ್ದ. ಅಲ್ಲದೇ, ಗ್ರಾಮ ಪಂಚಾಯಿತಿಯಲ್ಲಿ ಮನೆ, ಅನುದಾನ ಹಂಚಿಕೆ ಹಾಗೂ ಅಟ್ರಾಸಿಟಿ ಕೇಸ್‌ನಲ್ಲಿ ಓರ್ವ ಸದಸ್ಯನನ್ನು ಜೈಲಿಗೆ ಕಳುಹಿಸಿದ ಎನ್ನಲಾಗಿದೆ. ಭೀಮನಗೌಡನ ಮೇಲೆ ಹಲವು ಆಪಾದನೆಗಳು ಇದ್ದು, ರೌಡಿಶೀಟರ್‌ ಆಗಿದ್ದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ