ಗದಗ: ಐತಿಹಾಸಿಕ ಭೀಷ್ಮ ಕೆರೆ ಪರಿಸರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಸುಂದರ ವಿಹಾರ ಧಾಮ ಮಾಡಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ಭೀಷ್ಮ ಕೆರೆ ಆವರಣದಲ್ಲಿ ಈಗಾಗಲೇ ಬೋಟಿಂಗ್ ಆರಂಭವಾಗಿದ್ದು, ಪ್ರತಿನಿತ್ಯ 15 ಸಾವಿರ ಆದಾಯ ಸೃಷ್ಟಿಯಾಗುತ್ತಿದೆ. ಹೀಗಾಗಿ ಭೀಷ್ಮ ವಿಹಾರ ಧಾಮವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಮೇ 20 ರಂದು ಕೆರೆ ನೀರಿನ ಮೇಲೆ ಓಡುವ ಸೈಕಲ್ ಸವಾರಿ ಆರಂಭಿಸಲಾಗುವುದು. ಐತಿಹಾಸಿಕ ಕೆರೆ 63 ಎಕರೆ ಕೆರೆ ಅಭಿವೃದ್ಧಿ ಮಾಡಲು ಅವಕಾಶವಿದೆ. ಸದ್ಯ 33 ಎಕರೆ ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಸಾರ್ವಜನಿಕರೂ ಅಭಿವೃದ್ಧಿಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ವಿಹಾರಧಾಮ ಮತ್ತಷ್ಟು ಸುಂದರವಾಗಲು ಸಾಧ್ಯ ಎಂದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಪ್ರಾಸ್ತಾವಿಕ ಮಾತನಾಡಿ, 116 ಅಡಿ ಎತ್ತರದ ಬಸವ ಪುತ್ಥಳಿ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೇಮನಿ, ಎಸ್ಪಿ ಬಿ.ಎಸ್. ನೇಮಗೌಡ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಾಹುಬಲಿ ಜೈನರ ನಿರೂಪಿಸಿದರು.