ಕನ್ನಡಪ್ರಭ ವಾರ್ತೆ ಕಾಪು
ಅದಾನಿ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿಯಲ್ಲಿ ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲಭೂ ಸೌಕರ್ಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಪಂಚಾಯಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಬಳಿಯಿರುವ ಜಾರಂದಾಯ ಕೆರೆಯ ಅಭಿವೃದ್ಧಿ, ಪಣಿಯೂರು ಗ್ರಾಮದಲ್ಲಿ ನಾಲಾ ತಡೆಗೋಡೆ ಹಾಗೂ ಕೊರಗ ಸಮುದಾಯದ ಶ್ರೀ ಬ್ರಹ್ಮ ಗುಡಿಯ ಆವರಣಕ್ಕೆ ಆವರಣ ಗೋಡೆಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಕಿಶೋರ್ ಆಳ್ವ, ಅದಾನಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ನೆರೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸುಮಾರು ೨೩ ಕೋಟಿ ರು. ಅನುದಾನ ಘೋಷಿಸಿದ್ದು, ಇಲ್ಲಿಯ ತನಕ ೧೩ ಕೋಟಿ ರು.ಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ೩ ಕೋಟಿ ರು. ಅನುದಾನ ಘೋಷಿಸಿದ್ದು, ಸುಮಾರು ೧.೭೫ ಕೋಟಿ ರು.ಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದವರು ಹೇಳಿದರು.ಪಂಚಾಯಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಅದಾನಿ ಸಿಎಸ್‌ಆರ್ ಯೋಜನೆಯಡಿ ಸುತ್ತಲಿನ ಗ್ರಾಮಗಳಿಗದೆ ಹಲವಾರು ಅಗತ್ಯ ಸೌಕರ್ಯಗಳನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಪಂಚಾಯಿತಿ ಸದಸ್ಯರಾದ ಶರತ್ ಕುಮಾರ್, ಪ್ರಕಾಶ್ ಭಟ್, ಸುಲೈಮಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿ’ಸೋಜ಼ಾ ಮತ್ತು ಗ್ರಾಮಸ್ಥರಾದ ನಾರಾಯಣ ಪೂಜಾರಿ, ಲೋಕೇಶ್ ಶೆಟ್ಟಿ, ಗಣೇಶ ಶೆಟ್ಟಿ, ಸುಭಾಶ್ ಶೆಟ್ಟಿ, ಉಮೇಶ ಪೂಜಾರಿ, ಉಮೇಶ ಕೊರಗ, ಸುಧಾಕರ್, ತಿಮ್ಮ, ಭರತ್, ಕುಮಾರ, ಶಿವಾನಂದ, ಗುತ್ತಿಗೆದಾರರಾದ ಪ್ರಜ್ವಲ್ ಶೆಟ್ಟಿ, ಅದಾನಿ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ, ಅದಾನಿ ಫ಼ೌಂಡೇಷನ್‌ನ ಅನುದೀಪ್ ಇದ್ದರು.