ಭೂತೇರ ಕಲಾವಿದ ನರಸಪ್ಪಗೆ ಕಲಾವಿದರ ಒಕ್ಕೂಟದಿಂದ ಸನ್ಮಾನ

KannadaprabhaNewsNetwork | Published : Nov 6, 2023 12:46 AM

ಸಾರಾಂಶ

ಬೀದರ್‌ ಜಿಲ್ಲೆಯ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ, ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸೋನಾರೆ

ಬೀದರ್‌: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೀದರ್‌ ಜಿಲ್ಲೆಯ ಭೂತೇರ ಕಲಾವಿದ ನರಸಪ್ಪ ಮಾಳೆಗಾಂವ ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳಿಂದ ನಗರದ ನಾವದಗೆರಿಯ ಹನುಮಾನ ಮಂದಿರದಲ್ಲಿ ಭಾನುವಾರ ಶಾಲು ಹೊದಿಸಿ, ಸನ್ಮಾನಿಸಲಾಯಿತು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ರಾಜ್ಯ ಸರ್ಕಾರ ಬೀದರ ಗಡಿ ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಭೂತೇರ ಕುಣಿತ ಕಲೆಯನ್ನು ಜೀವಂತ ಇಟ್ಟಿರುವ ಬಡ ಕಲಾವಿದ ನರಸಪ್ಪ ಮಾಳೆಗಾಂವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ ಮಾತನಾಡಿ, ಬೀದರ್‌ ಗಡಿ ಜಿಲ್ಲೆಯಲ್ಲಿ ನರಸಪ್ಪ ಮಾಳೆಗಾಂವ ಅವರು ಭೂತೇರ ಕುಣಿತ ಕಲೆಯನ್ನು ಜೀವಂತ ಇಡಲು ತಮ್ಮ ಶಿಷ್ಯಂದಿರ ಸಂಖ್ಯೆ ಹೆಚ್ಚಿಸಬೇಕು. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಶಿಸಿ ಹೋಗುತ್ತಿರುವ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನರಸಪ್ಪ ಮಾಳೆಗಾಂವ ತಂಡ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭೂತೇರ ಕುಣಿತದ ಕಲಾವಿದರಾದ ನರಸಪ್ಪಾ ಮಾಳೆಗಾಂವ ಮಾತನಾಡಿ, ರಾಜ್ಯ ಸರ್ಕಾರ ನನ್ನಂತಹ ಬಡ ಕಲಾವಿದನಿಗೆ ಗುರುತಿಸಿ, ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಮಫಲಕ, ಬಂಗಾರದ ಪದಕ ಹಾಗೂ 5 ಲಕ್ಷ ರು. ನಗದು ಬಹುಮಾನ ನೀಡಿ, ಗೌರವಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಹೇಳಿದರು.

ಹಿರಿಯ ಸಾಹಿತಿ ರಮೇಶ ಬಿರಾದಾರ, ರಾಜಕುಮಾರ ಹೆಬ್ಬಾಳೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಯುವ ಸಂಘ-ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸುನೀಲ ಭಾವಿಕಟ್ಟಿ, ಪತ್ರಕರ್ತರಾದ ನಾಗಶೆಟ್ಟಿ ಧರಮಪೂರ, ಎಂ.ಪಿ. ಮುದಾಳೆ, ಹಾಜಿಪಾಶಾ ಬಾಳೂರ, ಯಾದವರಾವ ಘೋಡ್ಕೆ, ಸಂಜೀವಕುಮಾರ ಅತಿವಾಳೆ, ಪಂಢರಿ ನೇಳಗೆ, ರವಿ ನೇಳಗೆ, ಸಂಗ್ರಾಮ ಚಿಟ್ಟಾ, ಕಲಾವಿದರಾದ ಹಣಮಂತ ರಾಮಲು, ರೇಣುಕಾ ಅವರು ಸೇರಿದಂತೆ ನಾವದಗೇರಿಯ ಮಹಿಳೆಯರು, ಮಕ್ಕಳು, ಹಿರಿಯರು ಗಣ್ಯರು ಇದ್ದರು.

ಚಿತ್ರ 5ಬಿಡಿಆರ್50

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೀದರ್ನ ನರಸಪ್ಪ ಭೂತೆರಗೆ ಕಲಾವಿದರ ಒಕ್ಕೂಟದಿಂದ ಭಾನುವಾರ ಸನ್ಮಾನಿಸಲಾಯಿತು.

Share this article