ಬೆಲ್ಲ, ಉಪ್ಪಿನಕಾಯಿ, ವಿವಿಧ ವಸ್ತುಗಳ ಮಾರಾಟವೂ ಜೋರು
ಕಬ್ಬಿನ ಹಾಲನ್ನು ಸೇವಿಸುತ್ತ, ಕುರುಕಲು ತಿಂಡಿ ತಿನ್ನುತ್ತ, ಸಂಗೀತ ಆಸ್ವಾದಿಸುತ್ತ, ಕ್ರಿಕೆಟ್ ಪಂದ್ಯ ವೀಕ್ಷಿಸುತ್ತ ನಾಲ್ಕು ದಿನಗಳ ಕಾಲ ಸಾವಿರಾರು ಜನರು ಕೆರೆ ಆಲೆಮನೆ ಹಬ್ಬದಲ್ಲಿ ಸಂಭ್ರಮಿಸಿದರು. ಇದು ಹೊಸದೊಂದು ಲೋಕವನ್ನೇ ಸೃಷ್ಟಿಸಿದ್ದ ಸಿದ್ಧಾಪುರ ತಾಲೂಕಿನ ಭುವನಗಿರಿಯ ಕೆರೆಯ ತಟದಲ್ಲಿನ ಆಲೆಮನೆ ಹಬ್ಬ.
ಸುಷಿರ ಸಂಗೀತ ಪರಿವಾರ ಭುವನಗಿರಿ ಕೆರೆ ತಟದಲ್ಲಿ ಭುವನೇಶ್ವರಿ ದೇವಾಲಯ ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ಸಂಘಟಿಸಿದ್ದ ಕೆರೆ ಆಲೆಮನೆ ಹಬ್ಬ ಸಾವಿರಾರು ಜನರಿಗೆ ರಸದೌತಣ ನೀಡಿತು.ಕೆರೆಯ ಏರಿಯ ಮೇಲೆ ತಾಜಾ ಕಬ್ಬಿನ ಹಾಲು, ತೊಡೆದೇವು, ಕಬ್ಬಿನ ಹಾಲಿನ ದೋಸೆ, ಮಿರ್ಚಿ ಭಜಿ, ಗೋಲಿ ಭಜಿ, ಮದ್ದೂರು ವಡಾ, ಖಾರಾ ಮುಂಡಕ್ಕಿ, ಸಮೋಸಾ ತಿನ್ನುತ್ತಿದ್ದರೆ, ವೇದಿಕೆಯಲ್ಲಿ ಸಂಗೀತ ನೃತ್ಯದ ಸಮಾರಾಧನೆ. ಜತೆಗೆ ಭಾನುವಾರ ಬೃಹತ್ ಪರದೆಯಲ್ಲಿ ಭಾರತ ನ್ಯೂಜಿಲ್ಯಾಂಡ್ ಟಿ-20 ಫೈನಲ್ ಪಂದ್ಯ ವೀಕ್ಷಿಸಿದರು.
ಆಲೆಮನೆ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಆಲೆಮನೆ ಹಬ್ಬ ಏರ್ಪಡಿಸಿ ಊರಿಗೆ ಊರೇ ಸಂಭ್ರಮಿಸಿತು. ಆಲೆಮನೆಯಿಂದ ಬಂದ ಆದಾಯವನ್ನೆಲ್ಲ ಕೆರೆಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ. ಕಳೆದ ವರ್ಷವೂ ಭುವನಗಿರಿಯಲ್ಲಿ ಅದ್ಧೂರಿಯಿಂದ ಆಲೆಮನೆ ಹಬ್ಬ ನಡೆಸಲಾಗಿತ್ತು. ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದು ಹಾಗೂ ಬೇಡಿಕೆಯ ಮೇಲೆ ಮಾ. 14 ಹಾಗೂ 15ರಂದು ಎರಡು ದಿನಗಳ ಕಾಲ ಕೆರೆ ಆಲೆಮನೆ ಹಬ್ಬ ನಡೆಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಸಂಘಟಕ ನಾರಾಯಣ ಹೆಗಡೆ.