ಅಜೀಜಅಹ್ಮದ ಬಳಗಾನೂರ
ಪ್ರಶಸ್ತಿ ಮೊತ್ತ 10 ಸಾವಿರ ಡಾಲರ್ (₹8.5 ಲಕ್ಷ). ದೇಶದಲ್ಲಿಯೇ ಇಷ್ಟೊಂದು ಮೊತ್ತದ ಪ್ರಶಸ್ತಿ ಪಡೆದ ಮಹಿಳಾ ಸಂಘ ಎಂಬ ಕೀರ್ತಿಗೆ ಬೀಬಿ ಫಾತಿಮಾ ಸಂಘ ಪಾತ್ರವಾಗಿದೆ.
''''ನಿಸರ್ಗ ಆಧಾರಿತ ತಾಪಮಾನ ನಿಯಂತ್ರಣಕ್ಕೆ ಮಹಿಳೆ ಹಾಗೂ ಯುವಜನರ ನಾಯಕತ್ವ'''' ಎಂಬ ವಿಷಯ ಆಧರಿಸಿ ನಡೆದ ಈ ವರ್ಷದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ, ಅರ್ಜೆಂಟೀನಾ, ಬ್ರೆಝಿಲ್, ಪೆರು, ಇಂಡೋನೇಷ್ಯಾ, ಕೆನ್ಯಾ, ತಾಂಜಾನಿಯಾ, ಈಕ್ವೆಡಾರ್ ಸೇರಿದಂತೆ 103 ದೇಶಗಳ ಸುಮಾರು 700ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಭಾರತದ ಅದರಲ್ಲೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ‘ಬೀಬಿ ಫಾತಿಮಾ ಮಹಿಳಾ ಸಂಘ’ಈ ಅತ್ಯುನ್ನತ ಪುರಸ್ಕಾರಕ್ಕೆ ಭಾಜನವಾಗಿದೆ.ಸಂಘದ ಸಾಧನೆ: 2018ರಲ್ಲಿ ಸಹಜ ಸಮೃದ್ಧ ಬಳಗದ ಸಹಯೋಗದಲ್ಲಿ ತೀರ್ಥ ಗ್ರಾಮದಲ್ಲಿ ಕೇವಲ 14 ಮಹಿಳೆಯರಿಂದ ಸ್ಥಾಪನೆಯಾದ ಬೀಬಿ ಫಾತಿಮಾ ಮಹಿಳಾ ಸಂಘವು ಹಲವು ಸಾಧನೆಗಳಿಗೆ ಪಾತ್ರವಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಕೆ, ಸಮುದಾಯ ಬೀಜ ಬ್ಯಾಂಕ್, ಆಹಾರ- ಪೋಷಕಾಂಶ ಭದ್ರತೆ, ಸಿರಿಧಾನ್ಯ ಬೇಸಾಯ, ಸಂಸ್ಕರಣಾ ಘಟಕ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಜತೆಗೆ ಸುಮಾರು 30 ಗ್ರಾಮಗಳಲ್ಲಿ ನೈಸರ್ಗಿಕ ವಿಧಾನದಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಬೇಸಾಯವನ್ನು ಮರಳಿ ಚಾಲ್ತಿಗೆ ತಂದಿರುವುದು ಸಂಘದ ಹೆಗ್ಗಳಿಕೆ.
ಸಿರಿಧಾನ್ಯ ಸಂಸ್ಕರಣಾ ಘಟಕ: ಸಿರಿಧಾನ್ಯಗಳ ಸಂಸ್ಕರಣೆ ಸವಾಲು ಎದುರಾದಾಗ, ಸಹಜ ಸಮೃದ್ಧ’ಮಾರ್ಗದರ್ಶನದಲ್ಲಿ ಹೈದರಾಬಾದಿನ ‘ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ’ (ಐಐಎಂಆರ್) ನೆರವಿನೊಂದಿಗೆ ತೀರ್ಥ ಗ್ರಾಮದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಯಿತು. ಈ ಘಟಕವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವುದು ವಿಶೇಷ. ಜತೆಗೆ ಈ ಘಟಕವು ಸಂಪೂರ್ಣವಾಗಿ ಸೌರಶಕ್ತಿ ಆಧಾರಿತವಾಗಿರುವುದು ಮತ್ತೊಂದು ವಿಶೇಷ.
ಅಕ್ಟೋಬರ್ 9ಕ್ಕೆ ಪ್ರಶಸ್ತಿ ಪ್ರದಾನ: ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿಯನ್ನು ಅಕ್ಟೋಬರ್ 9ರಂದು ಬ್ರೆಜಿಲ್‌ನಲ್ಲಿ ಆನ್‌ಲೈನ್ ಮೂಲಕ ಪ್ರದಾನ ಮಾಡಲಾಗುತ್ತಿದೆ. ಬಳಿಕ ದೆಹಲಿಯಲ್ಲಿರುವ ಯುಎನ್‌ಡಿಪಿ ಸಂಸ್ಥೆ ಮೂಲಕ ಕಾರ್ಯಕ್ರಮ ಹಮ್ಮಿಕೊಂಡು ಮತ್ತೊಮ್ಮೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಗ್ರಾಮೀಣ ಭಾಗದಲ್ಲಿರುವ ಸಣ್ಣ ಮಹಿಳಾ ಸಂಘದ ಕಾರ್ಯ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇನ್ನೂ ಹೆಚ್ಚಿನ ಕಾರ್ಯಚಟುವಟಿಕೆ ಕೈಗೊಳ್ಳಲು ಈ ಪ್ರಶಸ್ತಿಯು ಉತ್ತೇಜನ ನೀಡಿದೆ. ಇದಕ್ಕೆಲ್ಲ ರೈತರ, ಸಹಜ ಸಮೃದ್ಧ ಬಳಗದ ಸಹಕಾರ ಕಾರಣ ಎಂದು ಬೀಬಿ ಫಾತಿಮಾ ಮಹಿಳಾ ಸಂಘದ ಅಧ್ಯಕ್ಷೆ ಬೀಬಿಜಾನ ಹಳೇಮನಿ ಹೇಳಿದರು.