ಮೈಕ್‌ಗಾಗಿ ಮೀರಾ ಶಿವಲಿಂಗಯ್ಯ ಮುದ್ದೇಗೌಡರ ನಡುವೆ ಕಿತ್ತಾಟ

KannadaprabhaNewsNetwork | Published : Nov 20, 2024 12:33 AM

ಸಾರಾಂಶ

ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್‍ಯಕಾರಿ ಸಮಿತಿ ಸದಸ್ಯ ಹಾಗೂ ಜಿಲ್ಲಾ ಕಸಾಪ ಸಂಚಾಲಕರ ನಡುವೆ ಮೈಕ್‌ಗಾಗಿ ಮಾತಿನ ಚಕಮಕಿ ನಡೆಸಿದ ಘಟನೆ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್‍ಯಕಾರಿ ಸಮಿತಿ ಸದಸ್ಯ ಹಾಗೂ ಜಿಲ್ಲಾ ಕಸಾಪ ಸಂಚಾಲಕರ ನಡುವೆ ಮೈಕ್‌ಗಾಗಿ ಮಾತಿನ ಚಕಮಕಿ ನಡೆಸಿದ ಘಟನೆ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆಯಿತು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲು ಕೇಂದ್ರ ಸಾಹಿತ್ಯ ಪರಿಷತ್ ಕಾರ್‍ಯಕಾರಿ ಸಮಿತಿ ಸದಸ್ಯ ಡಾ. ಎಚ್.ಎಸ್. ಮುದ್ದೇಗೌಡ ಹಾಗೂ ಜಿಲ್ಲಾ ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಸೇರಿದಂತೆ ಕಸಾಪ ಪದಾಧಿಕಾರಿಗಳು ಆಗಮಿಸಿದ್ದರು.

ಮೊದಲು ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಎಲ್ಲರನ್ನೂ ಸ್ವಾಗತಿಸಿ ನಂತರ ಪರಿಷತ್ತಿಗೆ ಸಂಬಂಧಿಸಿದಂತೆ ಮಾತನಾಡಲು ಮುಂದಾಗುತ್ತಿದ್ದಂತೆ ನೀವು ಮೊದಲು ಮಾತನಾಡುವಂತಿಲ್ಲ. ನಾನು ಸುದ್ದಿಗೋಷ್ಠಿ ಕರೆದಿದ್ದೇನೆ. ಹಾಗಾಗಿ ನಾನೇ ಮಾತನಾಡುತ್ತೇನೆ ಎಂದು ಮುದ್ದೇಗೌಡ ಅವರು ಮೈಕ್‌ ಅನ್ನು ಕಿತ್ತುಕೊಳ್ಳಲು ಯತ್ನಿಸಿದರು.

ನನ್ನನ್ನೂ ನೀವು ಕರೆದಿದ್ದೀರಿ. ಮೊದಲು ನಾನೇ ಮಾತನಾಡಬೇಕು ಎಂದು ಮೀರಾ ಶಿವಲಿಂಗಯ್ಯ ಪ್ರತಿಪಾದಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮುದ್ದೇಗೌಡ, ಮೈಕ್‌ ಅನ್ನು ಕಿತ್ತುಕೊಂಡು ನಾನು ಸುದ್ದಿಗೋಷ್ಠಿ ಏರ್ಪಡಿಸಿದ್ದೇನೆ. ಬೇಕಿದ್ದರೆ ನೀವು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಎಂದು ಹೇಳುತ್ತ ಮೈಕ್ ಕಿತ್ತುಕೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಕೊನೆಗೆ ಮೀರಾ ಶಿವಲಿಂಗಯ್ಯ ಸುದ್ದಿಗೋಷ್ಠಿಯಿಂದ ಹೊರ ನಡೆಯಲು ಮುಂದಾದರು.

ಸ್ಥಳದಲ್ಲಿದ್ದ ಇತರೆ ಪದಾಧಿಕಾರಿಗಳು ಮೀರಾ ಶಿವಲಿಂಗಯ್ಯ ಅವರನ್ನು ಸಮಾಧಾನಪಡಿಸಿ ಸುದ್ದಿಗೋಷ್ಠಿ ನಡೆಸಲು ಅನುವು ಮಾಡಿಕೊಟ್ಟರು. ಬಳಿಕ ಸುದ್ದಿಗೋಷ್ಠಿ ಆರಂಭವಾಯಿತಾದರೂ ಮೀರಾ ಶಿವಲಿಂಗಯ್ಯ ಅಸಮಾಧಾನದಿಂದಲೇ ಕುಳಿತಿದ್ದರು.

ಮಾತು ಆರಂಭಿಸಿದ ಮುದ್ದೇಗೌಡರು ಜಿಲ್ಲಾ ಕಸಾಪ ಸಮಿತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಂತೆ ಎಲ್ಲವೂ ತಿಳಿಯಾಯಿತು. ಪತ್ರಿಕಾಗೋಷ್ಠಿ ಮುಂದುವರೆದು ಅಂತಿಮವಾಗಿ ಮೀರಾ ಶಿವಲಿಂಗಯ್ಯ ಅವರು ಮಾತನಾಡಿ ಗೋಷ್ಠಿಯನ್ನು ಸಂಪನ್ನಗೊಳಿಸಿದರು.

Share this article