ಬಿಡದಿ ಟೌನ್ ಶಿಪ್ ಯೋಜನೆ: ಜಂಟಿ ಅಳತೆ ಕಾರ್ಯಕ್ಕೆ ಚಾಲನೆ

KannadaprabhaNewsNetwork |  
Published : Sep 11, 2025, 12:03 AM IST
4.ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿಗಳು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಯಲ್ಲಿ ಭೂ ಮಾಲೀಕರಿಗೆ ಪಾಲುದಾರಿಕೆ ಮತ್ತು ಭೂ ಪರಿಹಾರ ಘೋಷಿಸಿದ್ದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುರುವಾರದಿಂದ ಭೂ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಂಟಿ ಅಳತೆ ಕಾರ್ಯ ಪ್ರಾರಂಭಿಸುತ್ತಿದೆ.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಯಲ್ಲಿ ಭೂ ಮಾಲೀಕರಿಗೆ ಪಾಲುದಾರಿಕೆ ಮತ್ತು ಭೂ ಪರಿಹಾರ ಘೋಷಿಸಿದ್ದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುರುವಾರದಿಂದ ಭೂ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಂಟಿ ಅಳತೆ ಕಾರ್ಯ ಪ್ರಾರಂಭಿಸುತ್ತಿದೆ.

ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 9 ಸಾವಿರ ಎಕರೆ ಭೂ ಸ್ವಾಧೀನ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಪ್ರತಿ ಎಕರೆಗೆ ಶೇ.50 ರಷ್ಟು ವಸತಿ ನಿವೇಶನ ಹಾಗೂ ಶೇ.45ರಷ್ಟು ವಾಣಿಜ್ಯ ನಿವೇಶನಗಳನ್ನು ನೀಡಲಾಗುತ್ತದೆ. ಇದು ಬೇಡ ಎನ್ನುವುದಾದರೆ ಪ್ರತಿ ಎಕರೆಗೆ ಕನಿಷ್ಟ 1.5ರಿಂದ 3 ಕೋಟಿ ರುಪಾಯಿವರೆಗೆ ಭೂ ಮಾಲೀಕರಿಗೆ ಧನ ಪರಿಹಾರ ಸಿಗಲಿದೆ.

ಪರಿಹಾರಕ್ಕಾಗಿ ದಾಖಲೆ ನೀಡಬೇಕಾಗಿಲ್ಲ:

ಸಾಮಾನ್ಯವಾಗಿ ಭೂಸ್ವಾಧೀನ (ಎಲ್ಎಕ್ಯೂ) ಪ್ರಕ್ರಿಯೆ ವೇಳೆ ರೈತರು, ಭೂಮಿ ಕಳೆದುಕೊಳ್ಳುವ ಸಾರ್ವಜನಿಕರು ಭೂ ಪರಿಹಾರ ಪಡೆಯಲು ಹತ್ತಾರು ದಾಖಲೆಗಳನ್ನು ತಾವೇ ಕ್ರೋಡೀಕರಿಸಿ ಭೂ ಸ್ವಾಧೀನಾಧಿಕಾರಿಗಳಿಗೆ ನೀಡಬೇಕಿತ್ತು. ಆಗ ದಾಖಲೆಗಳ ಕೊರತೆ, ಪ್ರಕ್ರಿಯೆ ವಿಳಂಬ, ಮಧ್ಯವರ್ತಿಗಳ ಕಾಟ ಸೇರಿದಂತೆ ಅನೇಕ ಸಮಸ್ಯೆಗಳು ರೈತರನ್ನು ಕಾಡುತ್ತಿತ್ತು. ಭೂ ಪರಿಹಾರ ಪಡೆಯುವಷ್ಟರಲ್ಲಿ ರೈತರು ಹೈರಾಣಾಗುತ್ತಿದ್ದರು.

ಇದನ್ನು ಮನಗಂಡ ಪ್ರಾಧಿಕಾರ ಭೂ ಮಾಲೀಕರು ಮತ್ತು ರೈತರನ್ನು ಯೋಜನೆಯ ಪಾಲುದಾರರು ಎಂದು ಪರಿಗಣಿಸಿದೆ. ಪರಿಹಾರ ಘೋಷಣೆ ಮತ್ತು ವಿತರಣೆ ಪ್ರಕ್ರಿಯೆಗಾಗಿ ರೈತರಿಗೆ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ. ಬದಲಿಗೆ ಕಳೆದ 6 ತಿಂಗಳಿಂದ ನಿರಂತರವಾಗಿ ಪರಿಶ್ರಮ ಪಟ್ಟಿದೆ. ಭೂ ಸ್ವಾಧೀನಕ್ಕೆ ಒಳಗಾಗುವ ಜಮೀನಿನ ಅಗತ್ಯ ದಾಖಲೆಗಳನ್ನು ತಾನೇ ಸಿದ್ಧಪಡಿಸಿಕೊಂಡಿದೆ. ಈ ಮೂಲಕ ಪ್ರಾಧಿಕಾರ ಭೂ ಮಾಲೀಕರಿಗೆ ಅಡಚಣೆ, ಕಿರಿಕಿರಿ ರಹಿತ ಸುಗಮ ಭೂ ಪರಿಹಾರ ವಿತರಣೆಗೆ ಮಾದರಿ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡಿದೆ.

ಮಾಸ್ಟರ್ ಫೈಸ್ ಸಿದ್ಧ :

ಪರಿಹಾರ ವಿತರಣೆಗೆ ಭೂ ಮಾಲೀಕರಿಂದ ವೈಯಕ್ತಿಕ ದಾಖಲೆಗಳನ್ನು ಹೊರತುಪಡಿಸಿ ಇನ್ಯಾವುದೇ ದಾಖಲೆಗಳನ್ನು ಕೋರುವುದಿಲ್ಲ. ಭೂ ಸ್ವಾಧೀನಕ್ಕೆ ಒಳಪಡುವ 9 ಹಳ್ಳಿಗಳ 4.39 ಲಕ್ಷ ಪುಟಗಳ ಎಲ್ಲಾ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮತ್ತು ಡಿಜಿಟೈಸ್ ಮಾಡಗಿದೆ. ಪ್ರಾಥಮಿಕ ಅಧಿಸೂಚನೆಯ ಮೊದಲೇ ಎಲ್ಲಾ ಪಹಣಿಯ ದೋಷಗಳನ್ನು ತಿದ್ದುಪಡಿ ಮಾಡಲಾಗಿದೆ.

ಈ ಭಾಗದಲ್ಲಿ ಪೌತಿ ಖಾತಾ ಆಂದೋಲನವನ್ನು 3 ಬಾರಿ ನಡೆಸಲಾಗಿದೆ. ಪ್ರತಿ ಸರ್ವೆ ನಂಬರ್‌ಗೆ ಒಂದು ಫೈಲ್ ತೆರೆಯಲಾಗಿದ್ದು, ದಾಖಲೆಗಳನ್ನು ಈ ಕಡತದಲ್ಲಿ ಶೇಖರಿಸಿಡಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಪ್ರಾಧಿಕಾರವೇ ಸರ್ಕಾರದ ಎಲ್ಲಾ ಇಲಾಖೆ/ಸಂಸ್ಥೆಗಳಿಂದ ಪಡೆದಿದೆ. ರೈತರು ಜಮೀನಿನ ಖರೀದಿ ಸೇಲ್ ಡೀಡ್/ನ್ಯಾಯಾಲಯದ ಆದೇಶ/ಪಾರ್ಟಿಷನ್ , ಡೀಡ್/ವಿಲ್/ವಂಶವಕ್ಷ ಮುಂತಾದವು ಮಾತ್ರ ನೀಡಬೇಕಾಗುತ್ತದೆ. ಇನ್ಯಾವುದೇ ದಾಖಲೆಗಳನ್ನು ರೈತರಿಂದ ಕೇಳುವುದಿಲ್ಲ.

ನಿವೇಶನ ವಿತರಣೆ - ಮನೆ ನಿರ್ಮಾಣ:

ಯೋಜನಾ ಪ್ರದೇಶದಳಲ್ಲಿನ ಹಳ್ಳಿಗಳ ನಿವೇಶನ ರಹಿತರಿಗೆ ಅಭಿವೃದ್ಧಿ ಪಡಿಸಿದ ನಿವೇಶನ ನೀಡಲಾಗುವುದು. ಜೊತೆಗೆ ವಸತಿ ಇಲಾಖೆ ಅಥವಾ ಗೃಹ ನಿರ್ಮಾಣ ಮಂಡಳಿಯಿಂದ ಮನೆ ನಿರ್ಮಿಸಿಕೊಡಲಾಗುತ್ತದೆ. ಅರ್ಹ ಬಗರ್ ಹುಕುಂ (ಫಾರ್ಮ್ 50 - 53) ಭೂ ಬಳಕೆದಾರರಿಗೆ ನಿವೇಶನ ನೀಡಲಾಗುತ್ತದೆ.

ಯೋಜನೆಯಿಂದ ಸ್ಥಳಾಂತರಗೊಂಡವರಿಗೆ ಯೋಜನಾ ನಿರಾಶ್ರಿತ ಪ್ರಮಾಣಪತ್ರ, ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಪಡೆಯಬಹುದಾಗಿದೆ. ಅಲ್ಲದೆ, ಭೂ ಮಾಲೀಕರು-ರೈತರಿಗೆ ತೆರಿಗೆ ವಿನಾಯಿತಿ, ಆದಾಯ ತೆರಿಗೆಯಲ್ಲಿ ಮತ್ತು ನೋಂದಣಿ ಮತ್ತು ಮುಂದ್ರಾಂಕ ಶುಲ್ಕದಲ್ಲಿ ವಿನಾಯಿತಿ ಕೂಡ ಸಿಗಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಕೋಟ್ .................

ಬಿಡದಿ ಟೌನ್ ಶಿಪ್ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಪರಿಹಾರ ವಿತರಣೆ ಹಾಗೂ ಪುನರ್ವಸತಿ ಕಲ್ಪಿಸುವ ವೇಳೆ ರೈತರು ಇನ್ನಿತರ ಭೂ ಮಾಲೀಕರಿಗೆ ಯಾವುದೇ ಅಡಚಣೆ ಆಗದಿರಲಿ ಎಂಬ ಉದ್ದೇಶದಂತೆ ಸುಗಮ ಪರಿಹಾರ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ. ವೈಯಕ್ತಿಕ ದಾಖಲೆ ಹೊರತುಪಡಿಸಿ ಭೂ ಮಾಲೀಕರು ಇನ್ಯಾವ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಎಲ್ಲ ದಾಖಲೆಗಳನ್ನು ಪ್ರಾಧಿಕಾರವೇ ಸಿದ್ದಮಾಡಿಕೊಂಡಿದೆ.

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿಗಳು

ಕೋಟ್..............

ನಿಖರ ಮತ್ತು ಪಾರದರ್ಶಕ ಜಂಟಿ ಅಳತೆ ಮಾಡಲು ಇದೇ ಮೊದಲ ಬಾರಿಗೆ ಮೊಬೈಲ್ ಆಪ್ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ದೋಷರಹಿತ ಭೂ ಪರಿಹಾರ ನಿಗಧಿ ಸಾಧ್ಯವಾಗಲಿದೆ. ಇದೊಂದು ಮಾದರಿ ವ್ಯವಸ್ಥೆಯಾಗಿದ್ದು, 9 ಸಾವಿರ ಎಕರೆ ಭೂಮಿಗೆ 90 ದಿನದೊಳಗೆ ಜೆಎಂಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ.

-ಗಾಣಕಲ್ ನಟರಾಜು, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವದ್ಧಿ ಪ್ರಾಧಿಕಾರ.

ಬಾಕ್ಸ್....................

ಮರಗಳಿಗೆ ಪರಿಹಾರ ಮೊತ್ತ

ಮರಕನಿಷ್ಠ ಪರಿಹಾರಗರಿಷ್ಠ ಪರಿಹಾರ

ತೆಂಗು(1 ಮರಕ್ಕೆ)25,00040,000

ಮಾವು(1 ಮರಕ್ಕೆ)45,00064,000

ಅಡಿಕೆ(1 ಮರಕ್ಕೆ)6,0009,000

ಸಪೋಟ25,00040,000

ಹುಣಸೆ45,00060,000

ಹಲಸು25,00040,000

ಬಾಕ್ಸ್‌.............

ರೈತನಿಗೆ ದೊರೆಯುವ ಸೌಲಭ್ಯಗಳು ಏನು?:

1.ನಿಖರ ಮತ್ತು ಪಾದರ್ಶಕ ಭೂ ಪರಿಹಾರ ವಿತರಣೆಗೆ ಮೊಬೈಲ್ ಆಪ್ ಆಧಾರಿತ ಜಂಟಿ ಅಳತೆ ಪ್ರಮಾಣ ಪತ್ರ ವಿತರಣೆ

2.ಈ ಯೋಜನೆಯಲ್ಲಿ ರೈತರು ಪಾಲುದಾರರೂ ಆಗಬಹುದು. ಶೇ.50:50 ಅನುಪಾತದಲ್ಲಿ ವಸತಿ ನಿವೇಶ ಹಾಗೂ ಶೇ.55:45 ಅನುಪಾತದಲ್ಲಿ ವಾಣಿಜ್ಯ ನಿವೇಶನ ಪಡೆದುಕೊಳ್ಳಬಹುದು.

3.ಪಾಲುದಾರನಾಗಲು ಇಚ್ಛಿಸದಿದ್ದರೆ 2013ರ ಭೂ ಸ್ವಾಧೀನ ಕಾಯ್ದೆಯನ್ವಯ ಎಕರೆಗೆ ಕನಿಷ್ಠ 1.5 ರಿಂದ ಗರಿಷ್ಠ 3 ಕೋಟಿಯ ವರೆಗೆ ಪರಿಹಾರ ಪಡೆಯಬಹುದು.

4.ಯೋಜನೆ ಪೂರ್ಣಗೊಳ್ಳುವವರೆಗೆ ಭೂಮಿ ಕಳೆದುಕೊಳ್ಳುವವರಿಗೆ ವಾರ್ಷಿಕ ಭತ್ಯೆ ನೀಡಲಾಗುತ್ತದೆ. ಖುಷ್ಕಿ ಜಮೀನಿಗೆ ಎಕೆರೆಗೆ 30 ಸಾವಿರ, ತರಿ ಜಮೀನಿಗೆ ಎಕರೆಗೆ 40 ಸಾವಿರ, ಭಾಗಾಯ್ತು ಜಮೀನಿಗೆ ಎಕರೆಗೆ 50 ಸಾವಿರ ವಾರ್ಷಿ ಭತ್ಯೆ ಸಿಗಲಿದೆ. ಇಲ್ಲಿ ಭೂ ರಹಿತಿ ಕೃಷಿ ಕಾರ್ಮಿಕರಿಗೂ ವಾರ್ಷಿಕ 25 ಸಾವಿರ ಸಹಾಯಧನ ನೀಡಲಾಗುತ್ತದೆ.

5.ಸ್ಥಳೀಯ ಯುವಕರಿಗೆ ಆದ್ಯತೆ ಮೇರೆಗೆ ಸ್ಥಳೀಯ ಪ್ರಥಮ ಉದ್ಯೋಗ ನೀತಿ ರೂಪಿಸಿ, ಉದ್ಯೋಗ ನೀಡಲು ಪ್ರಾಧಿಕಾರ ಮುಂದಾಗಿದೆ.

6. ಯೋಜನಾ ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ ನಿವೇಶನಗಳನ್ನು ನೀಡಲಾಗುತ್ತಿದ್ದು, ವಸತಿ ನಿಗಮಗಳ ಮೂಲಕ ಮನೆಕಟ್ಟಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ.

7.ಹಳ್ಳಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಕರ್ನಾಟಕ ಪಬ್ಲಿಕ್ ಶಾಲೆ, ಆಸ್ಪತ್ರೆ, ಒಳಚರಂಡಿ ವ್ಯವಸ್ಥೆ, ರಸ್ತೆಗಳು, ಭೂಗತ ವಿದ್ಯುತ್ ಕೇಬಲ್ ಗಳು, ಆಟದ ಮೈದಾನ, ಉದ್ಯಾನಗಳು ಸೇರಿ ಇತರೆ ಅಭಿವೃದ್ಧಿ ಕಾರ್ಯಗಳು.

10ಕೆಆರ್ ಎಂನ್ .4,5,6.ಜೆಪಿಜಿ

4.ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿಗಳು.

5.ಗಾಣಕಲ್ ನಟರಾಜು, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.

6.ಸಾಂದರ್ಭಿಕ ಚಿತ್ರ.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!