ಬೀದರ್‌ ವಿಮಾನಯಾನ : ದೀಪಾವಳಿಗೆ ಖುಷಿ ಸುದ್ದಿ, ವರ್ಷಾಂತ್ಯಕ್ಕೆ ಹಾರಾಟ

KannadaprabhaNewsNetwork | Published : Oct 29, 2024 12:45 AM

ಸಾರಾಂಶ

ಬೀದರ್‌ ವಿಮಾನ ನಿಲ್ದಾಣದ ಬೆಂಗಳೂರು- ಬೀದರ್ - ಬೆಂಗಳೂರು ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯಿಸಿರುವುದು ಬೀದರ್‌ ವಿಮಾನಯಾನ ದೀಪಾವಳಿಗೆ ಖುಷಿ ಸುದ್ದಿ, ಇದೀಗ ಹೊಸ ವರ್ಷಕ್ಕೆ ಹಾರಾಟದ ಲಕ್ಷಣಗಳು ಗೋಚರಿಸಿವೆ.

ಕನ್ನಡಪ್ರಭ ವಾರ್ತೆ, ಬೀದರ್‌

ಬೀದರ್‌ ನಗರದಿಂದ ರಾಜಧಾನಿ ಬೆಂಗಳೂರಿಗೆ ನಾಗರಿಕ ವಿಮಾನ ಯಾನ ಸೇವೆ ಪುನಾರಂಭಿಸಲು ಹೆಚ್ಚುವರಿಯಾಗಿ ಬೇಕಾಗಿರುವ ಅನುದಾನವನ್ನು ಜಿಲ್ಲೆಗೆ ಹಂಚಿಕೆಯಾದ ಮ್ಯಾಕ್ರೋ ಯೋಜನೆಯಡಿಯಲ್ಲಿ ಭರಿಸುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಬೀದರ್‌ನಿಂದ ಬೆಂಗಳೂರಿಗೆ ವಿಮಾನಯಾನ ಸೇವೆಯ ಪುನರಾರಂಭ ಪಕ್ಕಾ ಎಂಬಂತಾಗಿದೆ.ಸಚಿವ ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ ಖಂಡ್ರೆ ಅವರು ವಿಮಾನಯಾನ ಪುನಾರಂಭಕ್ಕೆ ಈಗಾಗಲೇ ಹಲವಾರು ಸಭೆಗಳನ್ನು ನಡೆಸಿದ್ದು ಕೇಂದ್ರ ಸರ್ಕಾರ, ವಿಮಾನಯಾನ ಸೇವಾ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ವಿಮಾನ ಹಾರಾಟಕ್ಕೆ ಬೇಕಾಗುವ 15ಕೋಟಿ ರು.ಗಳ ಭರಿಸುವ ಕುರಿತಾದ ಸ್ತಾವನೆಯನ್ನು ಅನುಮೋದಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ನಾಗರೀಕ ವಿಮಾನಯಾನ ಸೇವೆಯಿಂದ ಇದಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಸಬ್ಸಿಡಿ ಹಣದ ಪೈಕಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಶೇ.70ರಷ್ಟು ಮತ್ತು ರಾಜ್ಯ ಸರ್ಕಾರ ಶೇ.30 ಭರಿಸಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಮಾನಯಾನ ಸೇವೆ ಪುನಾರಂಭವಾಗಲಿದೆ ಎಂದಿದ್ದರು.

ಇದೀಗ ವಿಮಾನಯಾನ ಹಾರಾಟ ಕುರಿತಂತೆ ಸಚಿವ ಸಂಪುಟ ಸಭೆಯು, ಬೆಂಗಳೂರು ಬೀದರ್‌ ವಿಮಾನ ಸಂಚಾರದ ವಿಷಯವಾಗಿ ಚರ್ಚಿಸಿ ಬೀದರ್‌ ವಿಮಾನ ನಿಲ್ದಾಣದ ಬೆಂಗಳೂರು- ಬೀದರ್ - ಬೆಂಗಳೂರು ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯಿಸಿರುವುದು ಬೀದರ್‌ ವಿಮಾನಯಾನ ದೀಪಾವಳಿಗೆ ಖುಷಿ ಸುದ್ದಿ, ಹೊಸ ವರ್ಷಕ್ಕೆ ಹಾರಾಟದ ಲಕ್ಷಣಗಳನ್ನು ಮತ್ತಷ್ಟು ಪಕ್ಕಾ ಮಾಡಿವೆ. ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಗಡಿ ಜಿಲ್ಲೆ ಬೀದರ್‌ನಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿದ್ದು, ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಡಿ ಬೀದರ್‌ದಲ್ಲಿರುವ ಭಾರತೀಯ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ನಾಗರೀಕ ವಿಮಾನ ಯಾನ ಮಂತ್ರಾಲಯದಡಿ ಬೆಂಗಳೂರಿನಿಂದ ಬೀದರ್‌ ನಗರಕ್ಕೆ ಸಂಪರ್ಕ ಕಲ್ಪಿಸುವ ನಾಗರಿಕ ವಿಮಾನಯಾನ ಸೇವೆಯು ಕಳೆದ 10 ತಿಂಗಳಿಂದ ಸ್ಥಗಿತಗೊಂಡಿದ್ದು, ಇದರಿಂದ ಈ ಭಾಗದ ಸಾರ್ವಜನಿಕರಿಗೆ ಹಾಗೂ ವಿದೇಶಿ ಪ್ರವಾಸಿಗರಿಗೆ ಭಾರಿ ಅನಾನುಕೂಲ ಉಂಟಾಗಿದ್ದು ಇದೀಗ ಖಾಸಗಿ ಸಂಸ್ಥೆಗಳು ವಿಮಾನಯಾನ ಸೇವೆ ಅಲಭ್ಯದಿಂದ ಉಂಟಾಗುವ ನಷ್ಟವನ್ನು ಸರ್ಕಾರದಿಂದ ಭರಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿರುವ ನಡೆ ಹೊಸ ಆಶಾಕಿರಣವನ್ನು ಮೂಡಿಸಿದೆ.

Share this article