ಕನ್ನಡಪ್ರಭ ವಾರ್ತೆ ಬೀದರ್
ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಔರಾದ್ ಶಾಸಕ ಪ್ರಭು ಚವ್ಹಾಣ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರ ನಿಯೋಗ ಮಂಗಳವಾರ ಮುಂಬೈನಲ್ಲಿ ಫಡ್ನವೀಸ್ ಅವರನ್ನು ಭೇಟಿ ಮಾಡಿ, ಕಲ್ಯಾಣ ಕರ್ನಾಟಕ ಹಾಗೂ ಮರಾಠವಾಡಾ ಪ್ರದೇಶದಲ್ಲಿ ಬರುವ ಎರಡೂ ರಾಜ್ಯಗಳ ಗಡಿ ಜಿಲ್ಲೆಗಳ ಅಭಿವೃದ್ಧಿ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದೆ.
ಬೀದರ್ ಜಿಲ್ಲೆಗೆ ಹೊಂದಿಕೊಂಡ ಲಾತೂರ್, ಉಸ್ಮಾನಾಬಾದ್, ಸೋಲಾಪುರ ಭಾಗದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡುವ ಅಗತ್ಯವಿದೆ. ಕೇಂದ್ರ ಸರ್ಕಾರದ ನೆರವಿನಿಂದ ಬೀದರ್ ಸಮೀಪದ ತೆಲಂಗಾಣದ ಜಹೀರಾಬಾದ್ ಹತ್ತಿರ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ ಸ್ಥಾಪಿಸಲಾಗುತ್ತಿದೆ. ಈ ಮಾದರಿಯಲ್ಲಿ ತಾವು ಸಹ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಪ್ರಯತ್ನಿಸಿ ಗಡಿಯಲ್ಲಿರುವ ಜನರಿಗೆ ಅನುಕೂಲವಾಗಿಸಬೇಕು ಎಂದು ಕೋರಲಾಗಿದೆ.ಮಹಾತ್ಮ ಬಸವಣ್ಣನವರ ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಮೊದಲ ಬಾರಿ ಸಂಸತ್ತು, ಪ್ರಜಾಪ್ರಭುತ್ವ ನೀಡಲಾಗಿದೆ. ಬಸವಕಲ್ಯಾಣ ಇದೀಗ ಅಂತಾರಾಷ್ಟ್ರೀಯ ಧಾರ್ಮಿಕ, ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಲಾತೂರಿನಿಂದ ವಾಯಾ ನೀಲಂಗಾ ಮೂಲಕ ಬಸವಕಲ್ಯಾಣಕ್ಕೆ ಹೊಸ ರೈಲು ಮಾರ್ಗ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಬಸವೇಶ್ವರ ರೈಲು ಮಾರ್ಗ ಆರಂಭಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪೂರಕ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂಬಂಧ ಜಿಲ್ಲಾ ಬಿಜೆಪಿಯು ಇತ್ತೀಚೆಗೆ ಬೀದರ್‌ಗೆ ಭೇಟಿ ನೀಡಿದ್ದ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ಹೇರಿದೆ. ಐತಿಹಾಸಿಕ ತೀರ್ಮಾನ: ಗಣೇಶೋತ್ಸವವನ್ನು ನಾಡ ಹಬ್ಬವನ್ನಾಗಿ ಘೋಷಣೆ ಮಾಡಿರುವ ಮಹಾರಾಷ್ಟ್ರ ಸರ್ಕಾರದ ತೀರ್ಮಾನ ಐತಿಹಾಸಿಕವಾಗಿದೆ. ಸಮಾಜದ ಸಂಘಟನೆ ಹಾಗೂ ಧಾರ್ಮಿಕ ಪರಂಪರೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇದೊಂದು ಮಾದರಿ ಕ್ರಮವಾಗಿದೆ ಎಂದು ಫಡ್ನವೀಸ್ ಅವರಿಗೆ ಸನ್ಮಾನಿಸಿದರು.ಕನ್ನಡಿಗರ ಅಭಿವೃದ್ಧಿಗಾಗಿ ಮಹಾ ಸರ್ಕಾರಕ್ಕೆ ಅಂಗಲಾಚಿದರೇಕೆ..?
ಈಗಾಗಲೇ ಗಡಿ ತಂಟೆ ತೆಗೆದು ನೆಲ, ಜಲಕ್ಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ಮುಂದೆ ಕರ್ನಾಟಕದ ಗಡಿಯಲ್ಲಿರುವ ಜನರಿಗೆ ಅನುಕೂಲ ಕಲ್ಪಿಸಲು ಕೈಗಾರಿಕಾ ವಲಯ ಸ್ಥಾಪಿಸಿ ಎಂದು ಅಂಗಲಾಚಿರುವ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ತಮ್ಮದೇ ಕೇಂದ್ರ ಸರ್ಕಾರದ ಮುಂದೆ ಮನವಿ ಸಲ್ಲಿಸಿಲ್ಲವೇಕೆ ಎಂಬುವುದು ಅಚ್ಚರಿ.ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿನ ಮರಾಠಿಗರಿಗೆ ತೊಂದರೆ ಇದೆ, ಉದ್ಯೋಗ, ಅನ್ನ ನೀರಿಗೂ ತಾರತಮ್ಯವಿದೆ, ಅದು ಮೊದಲಿನಿಂದಲೂ ಮರಾಠಿಗರದ್ದೇ ಹೀಗಾಗಿ ಆ ಭಾಗವನ್ನು ಮಹಾರಾಷ್ಟ್ರಕ್ಕೆ ಕೊಡಿ ಎಂದು ಕೇಂದ್ರದ ಮುಂದೆ, ಕೋರ್ಟ್ ಮುಂದೆ ಹೇಳುವ ಮಹಾರಾಷ್ಟ್ರಕ್ಕೆ ಈಗ ನಮ್ಮ ಕರ್ನಾಟಕದ ನಾಯಕರೇ ಆಹಾರ ಒದಗಿಸಿಕೊಟ್ಟರೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಗಡಿಯಲ್ಲಿ ಸಮಸ್ಯೆಗಳಿದ್ದರೆ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬಹುದಿತ್ತು, ಅದು ಕಾಂಗ್ರೆಸ್ಸು ಎಂದು ಮೂಗು ಮುರಿಯೋದಾದ್ರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವರ ಬಳಿ ಅಂಗಲಾಚಬೇಕಿತ್ತಲ್ಲ. ಅಷ್ಟಕ್ಕೂ ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಇದನ್ನು ತಡೆಯುವಂತೆ, ಮಹಾರಾಷ್ಟ್ರದಿಂದ ಸುತ್ತುವರೆದಿರುವ ಕರ್ನಾಟಕದ ಚೊಂಡಿಮುಖೇಡ ಗ್ರಾಮಕ್ಕೆ ಆಗುತ್ತಿರುವ ತೊಂದರೆಗಳ ಕುರಿತು ಸೇರಿದಂತೆ ಮತ್ತಿತರ ವಿಷಯಗಳತ್ತ ಗಮನ ಸೆಳೆಯಬಹುದಿತ್ತು. ಅಷ್ಟಕ್ಕೂ ಈ ಭೇಟಿಯ ಹಿಂದಿರುವ ಮರ್ಮ ಮತ್ತೇನೋ ಇದೆ ಎಂಬ ಅನುಮಾನಗಳು ನೂರಾರು.