;Resize=(412,232))
ಹುಬ್ಬಳ್ಳಿ : ಹೆಂಡತಿಯು ತನ್ನ ಇಬ್ಬರು ತಂಗಿಯರ ಫೋಟೋ ತೆಗೆಯಬೇಡ ಎಂದು ಗಂಡನಿಗೆ ಹೇಳಿದಾಗ್ಯೂ ಧಿಕ್ಕರಿಸಿ ಫೋಟೋ ತೆಗೆದಿದ್ದಕ್ಕೆ ದಂಪತಿ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಸೇರಿ ಕುಟುಂಬಸ್ಥರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಾಜಪೇಯಿ ನಗರದಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಮಗು ಸೇರಿ ಐವರು ಗಾಯಗೊಂಡಿದ್ದು, ಅವರನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಸುರೇಶ ಬೈಲಪತ್ತಾರ (33), ಈತನ ಪತ್ನಿ ರಾಜೇಶ್ವರಿ ಬೈಲಪತ್ತಾರ (24), ಪತ್ನಿಯ ತಂಗಿಯರಾದ ಶ್ರುತಿ, ರೇಷ್ಮಾ ಹಾಗೂ 6 ತಿಂಗಳ ಮಗುವಿನ ಮೇಲೆ ಆ್ಯಸಿಡ್ ಬಿದ್ದು ಗಂಭೀರ ಗಾಯವಾಗಳಾಗಿವೆ. ಗಾಯಾಳುಗಳನ್ನು ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದು, ಸುರೇಶ ಬೈಲಪತ್ತಾರ ಹಾಗೂ ರಾಜೇಶ್ವರಿ ಅವರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ತಾರಿಹಾಳದ ವಾಜಪೇಯಿ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿರುವ ಸುರೇಶ ಬೈಲಪತ್ತಾರ ಹಿತ್ತಾಳೆ, ತಾಮ್ರದ ಕೆಲಸ ಮಾಡಿಕೊಂಡಿದ್ದಾನೆ. ನಾದಿನಿಯರ ವಿಚಾರವಾಗಿ ಸುರೇಶ ಮತ್ತವನ ಪತ್ನಿ ರಾಜೇಶ್ವರಿ ನಡುವೆ ಜಗಳ ನಡೆದಿದೆ. ನಾದಿನಿಯರ ಫೋಟೋ ತೆಗೆಯದಂತೆ ಗಂಡನಿಗೆ ರಾಜೇಶ್ವರಿ ತಾಕೀತು ಮಾಡಿದ್ದಳು. ಈ ಮಧ್ಯೆಯೂ ಫೋಟೋ ತೆಗೆದು ಸುರೇಶ ಕಿರಿಕ್ ಮಾಡಿದ್ದು, ಇದೇ ವಿಚಾರವಾಗಿ ಜಗಳ ವಿಕೋಪಕ್ಕೆ ಹೋಗಿದೆ ಎನ್ನಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಮನೆಯಲ್ಲಿದ್ದ ತಾಮ್ರ, ಹಿತ್ತಾಳೆ ತೊಳೆಯಲು ಬಳಸುತ್ತಿದ್ದ ಕೆಮಿಕಲ್ (ಆ್ಯಸಿಡ್)ನಿಂದ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆತನ ಮೇಲೂ ಆ್ಯಸಿಡ್ ಬಿದ್ದು ಗಾಯಗೊಂಡಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.