ನುಡಿ ಜಾತ್ರೆಗೆ ಪರಂಪರೆ ನಗರಿ ಬೀದರ್‌ ಅಣಿ

KannadaprabhaNewsNetwork |  
Published : Nov 21, 2026, 01:30 AM IST
ಗೃಹಲಕ್ಷ್ಮೀ | Kannada Prabha

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಡಾ.ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ (ನ.21, 22) ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಂಪರೆ ನಗರಿ ಬೀದರ್ ಸಜ್ಜುಗೊಂಡಿದೆ. ಪರಿಷತ್ ಸದಸ್ಯರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಸಮ್ಮೇಳನಕ್ಕೆ ಸ್ವಾಗತಿಸುವ ಕಟೌಟ್ ಹಾಗೂ ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಡಾ.ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ (ನ.21, 22) ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಂಪರೆ ನಗರಿ ಬೀದರ್ ಸಜ್ಜುಗೊಂಡಿದೆ. ಪರಿಷತ್ ಸದಸ್ಯರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಸಮ್ಮೇಳನಕ್ಕೆ ಸ್ವಾಗತಿಸುವ ಕಟೌಟ್ ಹಾಗೂ ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

ನಗರದ ಪ್ರಮುಖ ವೃತ್ತಗಳಿಗೆ ನಾಡ ಧ್ವಜಗಳನ್ನು ಕಟ್ಟಿ ಶೃಂಗಾರಗೊಳಿಸಲಾಗಿದೆ. ನಗರದಲ್ಲಿ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಎಲ್ಲರ ಸಹಕಾರದಿಂದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ಸ್ವಾಗತ ಕಮಾನು ಸೇರಿ ಸಮ್ಮೇಳನ ಸ್ಥಳವಾದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರವನ್ನು ಮಧುವಣಗಿತ್ತೆಯಂತೆ ಸಿಂಗರಿಸಲಾಗಿದೆ. ವಿವಿಧ ಮಳಿಗೆ, ಪ್ರದರ್ಶನಗಳ ತಯಾರಿಗಳು ಕೂಡ ಆಗಿವೆ ಎಂದು ಹೇಳಿದ್ದಾರೆ.

ನೆರೆ ಜಿಲ್ಲೆ ಹಾಗೂ ಜಿಲ್ಲೆಯ ಎಲ್ಲೆಡೆಯಿಂದ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಭಾಗಹಿಸುವವರಿಗೆ ಊಟ, ಶುದ್ಧ ಕುಡಿಯು ವ ನೀರು ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಶನಿವಾರ (ನ.21) ಬೆಳಿಗ್ಗೆ ಬೆಳಿಗ್ಗೆ 8.30ಕ್ಕೆ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗ ಮಂದಿರದವರೆಗೆ ಅಲಂಕೃತ ಸಾರೋಟಿನಲ್ಲಿ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ, ಸಮ್ಮೇಳನ ಸರ್ವಾಧ್ಯಕ್ಷ ಡಾ.ಬಸವರಾಜ ಬಲ್ಲೂರ ಅವರ ವೈಭವದ ಮೆರವಣಿಗೆ ಜರುಗಲಿದೆ. ಶಾಸಕ ರಹೀಂಖಾನ್ ಮೆರವಣಿಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೆಳಿಗ್ಗೆ 11.30ಕ್ಕೆ ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪತ್ರಕರ್ತ ದಿನೇಶ ಅಮೀನ ಮಟ್ಟು ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದ್ದಾರೆ.

ಮಧ್ಯಾಹ್ನ 3ಕ್ಕೆ ಭೂಮಿ ತತ್ವ ಪ್ರಥಮ ಗೋಷ್ಠಿ, ಸಂಜೆ 5ಕ್ಕೆ ಬೆಳೆವ ಸಿರಿ(ಮಕ್ಕಳ ಮಾತು) ದ್ವಿತೀಯ ಗೋಷ್ಠಿ, ಸಂಜೆ 6.30ಕ್ಕೆ ಕಾವ್ಯ, ಕುಂಚ, ಗೀತ ಗಾಯನ ಹಾಗೂ ಕಿರ್ತನ ಜರುಗಲಿದೆ. ನ.22 ರಂದು ಬೆಳಿಗ್ಗೆ 9.30ಕ್ಕೆ ಸಂಸ್ಕೃತಿ ಸುದಿನ ಶಿರ್ಷಿಕೆಯಡಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ. ಸಂಜೆ 6.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ, ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವ, ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು.

ಸಾಹಿತಿ ಡಾ. ಬಿ.ಬಿ.ಪೂಜಾರ ಸಮಾರೋಪ ನುಡಿ, ಡಾ. ಬಸವರಾಜ ಬಲ್ಲೂರ ಸಮ್ಮೇಳನ ಸರ್ವಾಧ್ಯಕ್ಷರ ನುಡಿಗಳನ್ನಾಡುವರು. ಸಂಸದ ಸಾಗರ್ ಖಂಡ್ರೆ, ಜಿಲ್ಲೆಯ ಎಂಎಲ್ಸಿಗಳು ಇನ್ನಿತರರು ಭಾಗವಹಿಸುವರು

ಸಮ್ಮೇಳನ ಕನ್ನಡದ ಹಬ್ಬವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಭಿಮಾನದಿಂದ ಸಮ್ಮೇಳನದಲ್ಲಿ ಭಾಗವಹಿಸಬೇಕು. ಸಮ್ಮೇಳನದ ಯಶಸ್ವಿಗೆ ಕೈಜೋಡಿಸಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮನವಿ ಮಾಡಿದ್ದಾರೆ.

--

ಚಿತ್ರ 20ಬಿಡಿಆರ್60:

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಬೀದರಿನ ಮಡಿವಾಳ ಮಾಚಿದೇವ ವೃತ್ತಕ್ಕೆ ಕನ್ನಡ ಧ್ವಜ ಕಟ್ಟಿ ಶೃಂಗರಿಸಿರುವುದು

--

ಚಿತ್ರ 20ಬಿಡಿಆರ್61:

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬೀದರಿನ ರೋಟರಿ ಕನ್ನಡಾಂಬೆ ವೃತ್ತದಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ