ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ರೂಪಾಲಿ ನಾಯ್ಕ

KannadaprabhaNewsNetwork |  
Published : Aug 31, 2025, 02:00 AM IST
ರೂಪಾಲಿ ನಾಯ್ಕ ಮಾತನಾಡಿದರು  | Kannada Prabha

ಸಾರಾಂಶ

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆಪಾದಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಈ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾರವಾರ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆಪಾದಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಈ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಮುಂದೆ ನೋಡದೆ, ಕೇವಲ ಒಬ್ಬ ವ್ಯಕ್ತಿಯ ಹೇಳಿಕೆಯ ಆಧಾರದ ಮೇಲೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್ಐಟಿ (ವಿಶೇಷ ತನಿಖಾ ದಳ) ರಚನೆ ಮಾಡಿದೆ. ಎಡಪಂಥೀಯರನ್ನು ಮೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ನಿಗೂಢವಾಗಿ ಮೃತಪಟ್ಟಿರುವ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎನ್ನುವುದನ್ನು ನನ್ನ ಒತ್ತಾಸೆಯಾಗಿದೆ. ಆದರೆ ಸೌಜನ್ಯ ಪ್ರಕರಣದ ಎಳೆಯನ್ನು ಹಿಡಿದುಕೊಂಡು ಕೋಟ್ಯಂತರ ಜನರ ಶ್ರದ್ಧಾಕೇಂದ್ರವಾಗಿರುವ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಅವಹೇಳನ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ಸುಜಾತ್ ಭಟ್ ಅವರು ಅನನ್ಯಾ ಭಟ್ ಅವರ ಕಥೆಯನ್ನು ಹೇಗೆ ಹೆಣೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಸರ್ಕಾರ ಗುಪ್ತಚರ ಇಲಾಖೆಯಿಂದ ತಿಳಿದುಕೊಳ್ಳಬೇಕು ಏಕಾಏಕಿ ಎಸ್ಐಟಿ ರಚನೆಯ ಹಿಂದೆ ದೆಹಲಿಯಿಂದ ಕರೆ ಬಂದಿರಬಹುದು ಎಂದು ಅವರು ಆಪಾದಿಸಿದರು.

ಸಮೀರ ಎಂಬಾತ ಧರ್ಮಸ್ಥಳದ ಬಗ್ಗೆ ಎಐ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಬಿಡುವ ಮೂಲಕ ಕೋಟ್ಯಂತರ ಭಕ್ತರ ಭಾವನೆಗೆ ನೋವನ್ನುಂಟು ಮಾಡಿದ್ದಾನೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಹಿಂದೂ ದೇವಾಲಯಗಳ ಮೇಲೆ ಪರೋಕ್ಷವಾಗಿ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದೂಗಳು ಸುಮ್ಮನೆ ಇರಬಾರದು, ಸುಮ್ಮನೆ ಇದ್ದರೆ ಪಾಕಿಸ್ತಾನದಲ್ಲಿದ್ದಂತೆ ಅನಿಸುತ್ತದೆ ಎಂದು ಹೇಳಿದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಜರಾಯಿ ಇಲಾಖೆಯ ದೇವಾಲಯಗಳ ಅಭಿವೃದ್ಧಿಗೆಂದು ಹತ್ತು ಕೋಟಿ ರು. ಮೀಸಲಿಟ್ಟಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಆ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಅವರು ಆಪಾದಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಧರ್ಮ ರಕ್ಷಣೆಗಾಗಿ ಧರ್ಮಯುದ್ಧ ಘೋಷಣೆಯಡಿ ಸೆ. 1ರಂದು ಧರ್ಮಸ್ಥಳದಲ್ಲಿ ಲಕ್ಷಾಂತರ ಜನರು ಸೇರಲಿದ್ದಾರೆ. ಜಿಲ್ಲೆಯಿಂದ 4-5 ಸಾವಿರ ಕಾರ್ಯಕರ್ತರು ಮತ್ತು ಭಕ್ತರು ತೆರಳಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಜಗದೀಶ ನಾಯಕ ಮೊಗಟಾ, ಪ್ರಶಾಂತ ನಾಯ್ಕ, ನಗರಸಭೆ ಅಧ್ಯಕ್ಷ ರವಿ ಅಂಕೋಲೇಕರ್, ಮನೋಜ್ ಭಟ್, ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!