ಎಸ್. ನಿಜಲಿಂಗಪ್ಪ ಅವಿರೋಧ ಆಯ್ಕೆಯಾದ ಶಿಗ್ಗಾಂವಿಯಲ್ಲೀಗ ಬಿಗ್ ಫೈಟ್

KannadaprabhaNewsNetwork | Published : Oct 17, 2024 12:09 AM

ಸಾರಾಂಶ

ನವ ಕರ್ನಾಟಕದ ನಿರ್ಮಾತೃ ಎಸ್. ನಿಜಲಿಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾದ ಹಾಗೂ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಬಾರಿ ಗೆದ್ದು ಮುಖ್ಯಮಂತ್ರಿಯಾಗಲು ವೇದಿಕೆಯಾದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಸಲ ಉಪಚುನಾವಣೆ ನಡೆಯುತ್ತಿದೆ.

ನಾರಾಯಣ ಹೆಗಡೆ

ಹಾವೇರಿ: ನವ ಕರ್ನಾಟಕದ ನಿರ್ಮಾತೃ ಎಸ್. ನಿಜಲಿಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾದ ಹಾಗೂ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಬಾರಿ ಗೆದ್ದು ಮುಖ್ಯಮಂತ್ರಿಯಾಗಲು ವೇದಿಕೆಯಾದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಸಲ ಉಪಚುನಾವಣೆ ನಡೆಯುತ್ತಿದೆ.

ಇಬ್ಬರು ಸಿಎಂಗಳನ್ನು ನೀಡಿದ ಹೆಗ್ಗಳಿಕೆ ಇರುವ ಕ್ಷೇತ್ರದಲ್ಲೀಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಕುಸ್ತಿ ನಡೆದಿದೆ.

ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಶಿಗ್ಗಾಂವಿ ಕ್ಷೇತ್ರದ ಜನತೆ ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರಿಗೂ ಮಣೆ ಹಾಕಿದ್ದಾರೆ.

2008ರಿಂದ 2023ರ ಚುನಾವಣೆ ವರೆಗೂ ಕ್ಷೇತ್ರವು ಬೊಮ್ಮಾಯಿ ಅವರ ಭದ್ರಕೋಟೆಯಾಗಿತ್ತು. ಈ ಸಲ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉಪಚುನಾವಣೆ ಎದುರಾಗಿದೆ.

ನಿಜಲಿಂಗಪ್ಪ ಅವಿರೋಧ ಆಯ್ಕೆ: ದಾರ್ಶನಿಕರಿಗೆ, ರಾಜಕೀಯ ಮುತ್ಸದ್ದಿಗಳ ಜನ್ಮಸ್ಥಳ ಹಾಗೂ ಗಣ್ಯರಿಗೆ ರಾಜಕೀಯ ಹುಟ್ಟು ನೀಡಿರುವ ಶಿಗ್ಗಾಂವಿ ಕ್ಷೇತ್ರವು ೧೯೫೭ರಿಂದ 2023ರ ವರೆಗೆ 15 ಚುನಾವಣೆಗಳನ್ನು ಕಂಡಿದೆ. ಅವುಗಳಲ್ಲಿ ಎಂಟು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಎರಡು ಬಾರಿ ಪಕ್ಷೇತರರು, ನಾಲ್ಕು ಸಲ ಬಿಜೆಪಿ ಹಾಗೂ ಒಂದು ಸಲ ಜೆಡಿಎಸ್ ಗೆಲವು ಸಾಧಿಸಿವೆ. ಕ್ಷೇತ್ರವು ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ.

ರಾಜಕೀಯ ಮುತ್ಸದ್ದಿ, ಕಾಂಗ್ರೆಸ್‌ನ ಎಸ್. ನಿಜಲಿಂಗಪ್ಪ ಅವರು ೧೯೬೭ರ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ವಿರೋಧವಾಗಿ ಆಯ್ಕೆಯಾಗಿದ್ದರು. ಆ ಮೂಲಕ ರಾಜ್ಯದ ಏಳನೇ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಮಾಡಿದ್ದು ಶಿಗ್ಗಾಂವಿ ಕ್ಷೇತ್ರ. 2008ರಿಂದ ಸತತ ನಾಲ್ಕು ಸಲ ಬಸವರಾಜ ಬೊಮ್ಮಾಯಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿ, ಗೃಹ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಕ್ಷೇತ್ರದ ಮಹಿಮೆ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ ಇದೇ ಮೊದಲ ಬಾರಿಗೆ ಕ್ಷೇತ್ರ ಉಪಚುನಾವಣೆ ಎದುರಿಸುತ್ತಿದ್ದು, ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಈವರೆಗೆ ಗೆದ್ದವರು: ೧೯೫೭ರಲ್ಲಿ ಆರ್.ಸಿ. ಪಾಟೀಲ ಕಾಂಗ್ರೆಸ್‌ನಿಂದ, ೧೯೬೨ರಲ್ಲಿ ಎಫ್.ಎಸ್. ತಾವರೆ ಕಾಂಗ್ರೆಸ್‌ನಿಂದ, ೧೯೬೭ರಲ್ಲಿ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೯೭೨ರಿಂದ ೧೯೮೩ರ ವರೆಗೆ ಸತತ ಮೂರು ಬಾರಿ ಎಂ.ಕೆ.ಎಂ. ನದಾಫ್ ಅವರು ಕಾಂಗ್ರೆಸ್‌ನಿಂದ, ೧೯೮೫ರಲ್ಲಿ ಎನ್.ವಿ. ಪಾಟೀಲ ಪಕ್ಷೇತರರಾಗಿ, ೧೯೮೯, ೧೯೯೪ರಲ್ಲಿ ಮಂಜುನಾಥ ಕುನ್ನೂರ ಕಾಂಗ್ರೆಸ್‌ನಿಂದ, ೧೯೯೯ರಲ್ಲಿ ಸೈಯದ್ ಅಜ್ಜಂಫೀರ್ ಖಾದ್ರಿ ಜೆಡಿಎಸ್‌ನಿಂದ, ೨೦೦೪ರಲ್ಲಿ ರಾಜಶೇಖರ ಸಿಂಧೂರ ಪಕ್ಷೇತರರಾಗಿ, ೨೦೦೮ರಿಂದ 2023ರ ವರೆಗೆ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಭದ್ರಕೋಟೆ ಕೈ ವಶಕ್ಕೆ ಫೈಟ್‌: ಕಳೆದ ನಾಲ್ಕು ಚುನಾವಣೆಗಳಿಂದಲೂ ಬಿಜೆಪಿಯಿಂದ ಸ್ಪರ್ಧಿಸಿ ಬಸವರಾಜ ಬೊಮ್ಮಾಯಿ ಅವರು ಗೆಲುವು ಸಾಧಿಸುತ್ತ ಬಂದಿದ್ದಾರೆ. ಆ ಮೂಲಕ ಶಿಗ್ಗಾಂವಿ-ಸವಣೂರು ಕ್ಷೇತ್ರ ಬಿಜೆಪಿ ಭದ್ರಕೋಟೆ ಎನಿಸಿತ್ತು. ಆದರೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡುತ್ತಲೇ ಬಂದಿದೆ. ಕ್ಷೇತ್ರದಲ್ಲಿ ೨,೩೬,೭೯೦ ಮತದಾರರಿದ್ದು, ಈ ಪೈಕಿ 80 ಸಾವಿರ ಲಿಂಗಾಯತರು, 55 ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ. ಆದ್ದರಿಂದ ಈ ಎರಡು ಸಮುದಾಯಗಳ ಮತ ಸೆಳೆಯಲು ಎಲ್ಲ ಪಕ್ಷಗಳು ಪ್ರಯತ್ನ ನಡೆಸುತ್ತಿವೆ. 25 ಸಾವಿರ ಕುರುಬ, ಎಸ್ಸಿ 30 ಸಾವಿರ, ಎಸ್ಟಿ 22 ಸಾವಿರ, ಇತರರು 15 ಸಾವಿರ ಮತದಾರರಿದ್ದಾರೆ.

ಉಪಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಂದ ಲಾಬಿ ಶುರುವಾಗಿದೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಅಭಿಪ್ರಾಯವೇ ಬಹುತೇಕ ಅಂತಿಮವಾಗಲಿದೆ. ಇನ್ನು ಕಾಂಗ್ರೆಸ್‌ ಟಿಕೆಟ್‌ಗಾಗಿ ಈ ಸಲ ಭಾರೀ ಪೈಪೋಟಿ ನಡೆದಿದೆ. ಆದರೆ, ಮುಸ್ಲಿಮರಿಗೆ ಟಿಕೆಟ್‌ ಕೊಡಬೇಕೋ ಅಥವಾ ಬೇರೆಯವರಿಗೆ ನೀಡಬೇಕೋ ಎಂಬ ಗೊಂದಲ ಪಕ್ಷದ ನಾಯಕರಲ್ಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಇನ್ನು ಎರಡು ದಿನವಷ್ಟೇ ಬಾಕಿಯಿದ್ದು, ಯಾವ ಪಕ್ಷವೂ ಅಭ್ಯರ್ಥಿ ಹೆಸರು ಘೋಷಿಸಿಲ್ಲ. ಯಾರೇ ಸ್ಪರ್ಧಿಸಿದರೂ ಜಿದ್ದಾಜಿದ್ದಿಯ ಕಣವಾಗುವುದರಲ್ಲಿ ಎರಡು ಮಾತಿಲ್ಲ.

Share this article