ಕಾಂಗ್ರೆಸ್ ನಿಂದಲೇ ಅಂಬೇಡ್ಕರ್ ಗೆ ಮಹಾ ಅಪಮಾನ

KannadaprabhaNewsNetwork | Published : Dec 26, 2024 1:00 AM

ಸಾರಾಂಶ

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿದಷ್ಟು ಅವಮಾನ ಯಾರೂ ಮಾಡಿಲ್ಲ. ದೇಶದ ಶೋಷಿತ ಸಮುದಾಯದ ಯುವಕರು ಈ ವಾಸ್ತವಾಂಶ ಅರಿಯುವ ಅಗತ್ಯವಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿದಷ್ಟು ಅವಮಾನ ಯಾರೂ ಮಾಡಿಲ್ಲ. ದೇಶದ ಶೋಷಿತ ಸಮುದಾಯದ ಯುವಕರು ಈ ವಾಸ್ತವಾಂಶ ಅರಿಯುವ ಅಗತ್ಯವಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬದುಕಿದ್ದಾಗಲೂ ಆನಂತರ ಸತ್ತ ಮೇಲೂ ಕೂಡ ಅವರನ್ನು ಅಪಮಾನಿಸುವುದ ನಿಲ್ಲಿಸಿಲ್ಲ. ದೇಶ ಸ್ವಾತಂತ್ರವಾದ ಸಂದರ್ಭದಲ್ಲಿ ನನಗೆ ಅರ್ಥ ಮಂತ್ರಿ ಸ್ಥಾನವನ್ನು ನೀಡುವಂತೆ ಅಂದಿನ ಪ್ರಧಾನ ಮಂತ್ರಿ ನೆಹರುರವರನ್ನು ಅಂಬೇಡ್ಕರ್ ಕೇಲಿದಾಗ ತಿರಸ್ಕರಿಸಿ ಕಾನೂನು ಮಂತ್ರಿಯನ್ನಾಗಿ ಮಾಡಿದರು. ನಂತರ ಅವರು ನೆಹರು ಕ್ಯಾಬಿನೆಟ್‌ನಲ್ಲಿ ಬಹಳ ದಿವಸ ಇರಲಿಲ್ಲ. ಅವಮಾನವನ್ನು ಸಹಿಸಿಕೊಳ್ಳಲಾರದೇ ರಾಜೀನಾಮೆ ಕೊಟ್ಟು ಹೊರ ಬಂದರು. 1952ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದಾಗ ಅವಿರೋಧ ಆಯ್ಕೆ ಮಾಡಬಹುದಾಗಿತ್ತು. ಅವರನ್ನು ಸೋಲಿಸಿ ಸಂಭ್ರಮಿಸುವ ಕೆಲಸ ಕಾಂಗ್ರೆಸ್ ಮಾಡಿತೆಂದು ದೂರಿದರು. ಕಾಂಗ್ರೆಸ್‌ನ ಗುಲಾಮಿತನದಿಂದ ದಲಿತರು ಹೊರ ಬರುವ ತನಕ ಉದ್ಧಾರ ಸಾಧ್ಯವಿಲ್ಲ. ಅಂಬೇಡ್ಕರ್ ರವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಸರಿಯಿಲ್ಲ, ಇದನ್ನು ತಿಳಿಸುವ ಕಾರ್ಯವಾಗಬೇಕಿದೆ. ಅಂಬೇಡ್ಕರ್ ರವರಿಗೆ ಭಾರತ ರತ್ನ ನೀಡಲಿಲ್ಲ. ಆದರೆ ನೆಹರು ರವರು ಪ್ರಧಾನ ಮಂತ್ರಿಯಾಗಿದ್ಧಾಗ ಅವರೇ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದು ಹೇಳಿದರು. ಅಂಬೇಡ್ಕರ್ ರವರ ನಿಧನ ಸಮಯದಲ್ಲಿ ಅವರ ದೇಹದ ಅಂತ್ಯಕ್ರಿಯೆ ನಡೆಸಲು ದೆಹಲಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಲಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ನೆಹರು ಮನೆತನದವರಿಗೆ ಅಂತ್ಯ ಸಂಸ್ಕಾರ ಮಾಡಲು ನೂರಾರು ಎಕರೆ ಜಾಗವನ್ನು ನೀಡಿತು. ಅದು ಅವರ ಅಪ್ಪನ ಮನೆಯ ಆಸ್ತಿಯೇನಲ್ಲ. ಅಂಬೇಡ್ಕರ್ ಸತ್ತಾಗ ಉಳಲಿಕ್ಕೆ ಜಾಗ ಕೊಡದಂತಹ ಕಾಂಗ್ರೆಸ್ ಪಕ್ಷವನ್ನು ತಿಳುವಳಿಕೆ ಇಲ್ಲದ ಯುವಕರು ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರಿಗೆ ಶಿಕ್ಷಣವನ್ನು ನೀಡದೆ ದಲಿತರನ್ನು ಕತ್ತಲಿನಲ್ಲಿ ಇಟ್ಟಿದೆ. ಇವರಿಗೆ ಶಿಕ್ಷಣ ನೀಡಿದರೆ ನಮಗೆ ಮತಗಳು ಬರುವುದಿಲ್ಲ ಎಂದು ಮನಗಂಡು ಅವರಿಗೆ ಶಿಕ್ಷಣವನ್ನು ನೀಡದೇ ಬರೀ ಆಹಾರ, ಆರೋಗ್ಯ, ಮನೆ ಬಗ್ಗೆ ಮಾತ್ರವೇ ಮಾತನಾಡುತ್ತಿದೆ ಎಂದು ಆರೋಪಿಸಿದರು. ಸುಳ್ಳು ಆಪಾದನೆ ಮೂಲಕ ಅಮಿತ್ ಶಾ ರವರ ವಿರುದ್ಧ ದಲಿತರನ್ನು ಎತ್ತಿ ಕಟ್ಟುವಂತಹ ಹುನ್ನಾರ ಮಾಡಲಾಗುತ್ತಿದೆ. ನೆಹರು ಮನೆತನ ಮತ್ತು ಕಾಂಗ್ರೆಸ್ಸಿನ ಗುಲಾಮಿ ಮನಸ್ಥಿತಿಯಿಂದ ನಾವು ಹೊರಬರಬೇಕು. ಹೊರಗೆ ಬರದೇ ಇದ್ದರೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬಯಸಿದಂತಹ ಸ್ವಾತಂತ್ರ್ಯ ದಲಿತರಿಗೆ ಈ ದೇಶದಲ್ಲಿ ಸಿಗಲಿಕ್ಕೆ ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಬರೀ ಅಂಬೇಡ್ಕರ್ ರವರಿಗೆ ಮಾತ್ರವಲ್ಲ ಬಾಬು ಜಗಜೀವನ್ ರಾಂ ಅವರಿಗೂ ಅಪಮಾನ ಮಾಡಿದೆ. ಅವರು ಈ ದೇಶದ ಪ್ರಧಾನ ಮಂತ್ರಿ ಆಗಬೇಕಾಗಿತ್ತು. ಆಗ ಇಂದಿರಾಗಾಂಧಿ ಕುತಂತ್ರದಿಂದ ಅವರು ಸೋಲು ಅನುಭವಿಸಬೇಕಾಯಿತು. ಕರ್ನಾಟಕದಲ್ಲಿ ದಿ. ದೇವರಾಜ ಅರಸು ರವರು ಮುಖ್ಯಮಂತ್ರಿ ಆಗಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದವರು ಅಂಥವರನ್ನು ಸಹ ಕಾಂಗ್ರೆಸ್ಸಿನಿಂದ ಉಚ್ಛಾಟನೆ ಮಾಡಲಾಯಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಂತಹ ವಿ.ಪಿ.ಸಿಂಗ್ ರವರನ್ನು ಕಾಂಗ್ರೆಸ್ ನವರು ಉಚ್ಛಾಟನೆ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನೆಲೆ ತಂದುಕೊಟ್ಟ ವೀರೇಂದ್ರ ಪಾಟೀಲ್ ರವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ವೇಳೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು, ಇದೇ ಕಾಂಗ್ರೆಸ್ ಪಕ್ಷ ಎಂದು ಆಪಾದಿಸಿದರು. ಅಮಿತ್ ಶಾ ರಾಜ್ಯಸಭೆಯಲ್ಲಿ ಉತ್ತರ ಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ ನವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅದನ್ನು ಕಾಂಗ್ರೆಸ್‌ನವರು ತಪ್ಪಾಗಿ ಅರ್ಥೈಸಿ ಅಂಬೇಡ್ಕರ್‌ರವರ ವಿರೋಧಿ ಅನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಅಂಬೇಡ್ಕರ್ ಅವರೇ ಕಾಂಗ್ರೆಸ್ ಉರಿಯುವ ಮನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜನ್, ನವೀನ್ ಚಾಲುಕ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article