ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವತಿಯಿಂದ ಫೆ.19 ಮತ್ತು 20ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದಲ್ಲಿನ ಎಲ್ಲ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗಾಗಿ ಯುವ ಸಮೃದ್ಧಿ ಸಮ್ಮೇಳನ- ರಾಜ್ಯಮಟ್ಟದ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ಈ ಮೇಳದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲು ಅನುಕೂಲ ಆಗುವಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ, ಶಾಲಾ- ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.ಎಲ್.ಇ.ಡಿ. ಪರದೆಗಳ ಮೇಲೆ ಪ್ರಚಾರಕ್ಕೆ ಪಾಲಿಕೆಯಿಂದ ಕ್ರಮವಹಿಸಬೇಕು. ಅಲ್ಪಸಂಖ್ಯಾತರ ಹಾಸ್ಟೆಲ್‍ಗಳು, ಇತರೇ ಹಿಂದುಳಿದ, ಪರಿಶಿಷ್ಟ ಜಾತಿ ವರ್ಗಗಳ ವಸತಿ ನಿಲಯಗಳಲ್ಲಿ, ಎಂಜಿನಿಯರಿಂಗ್ ಕಾಲೇಜುಗಳು, ಐ.ಟಿ.ಐ. ಡಿಪ್ಲೋಮಾ ಕಾಲೇಜುಗಳಲ್ಲಿನ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು, ಯುವನಿಧಿ ಗ್ಯಾರಂಟಿ ಯೋಜನೆ ಅರ್ಜಿದಾರರು ಹಾಗೂ ಫಲಾನುಭವಿಗಳು ಮೇಳದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.
ಆಸಕ್ತರು ತಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆಗಳಿಗೆ, ಅಗತ್ಯ ತರಬೇತಿಗಳಿಗಾಗಿಯೂ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರು ತಮ್ಮ ನೋಂದಣಿಗಾಗಿ http:skillconect.kaushalkar.com ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ, ನಗರ ಯೋಜನಾ ನಿರ್ದೇಶಕ ಮನೋಹರ್, ನರೇಗಾ ಯೋಜನಾ ನಿರ್ದೇಶಕಿ ನಂದಿನಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- - - -2ಎಸ್‌ಎಂಜಿಕೆಪಿ03:ಉದ್ಯೋಗ ಮೇಳದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು.