ಭಗತ್ ಸಿಂಗ್. ಸುಖದೇವ್. ಆಜಾದ್ ಚಂದ್ರಶೇಖರ್ ಅವರಂತಹ ದೇಶಪ್ರೇಮಿಗಳ ಸ್ಮರಣೆ, ಪ್ರೇರಣೆಯಿಂದ ಮಾತ್ರ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ದೋ. ಕೇಶವಮೂರ್ತಿ ಅಭಿಪ್ರಾಯಪಟ್ಟರು.
ಸೋಮವಾರಪೇಟೆ: ಭಗತ್ ಸಿಂಗ್. ಸುಖದೇವ್. ಆಜಾದ್ ಚಂದ್ರಶೇಖರ್ ಅವರಂತಹ ದೇಶಪ್ರೇಮಿಗಳ ಸ್ಮರಣೆ, ಪ್ರೇರಣೆಯಿಂದ ಮಾತ್ರ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ದೋ. ಕೇಶವಮೂರ್ತಿ ಅಭಿಪ್ರಾಯಪಟ್ಟರು. ಹಿಂದೂ ಸಂಗಮ ಆಯೋಜನ ಸಮಿತಿ ಅಬ್ಬೂರುಕಟ್ಟೆ ಮಂಡಲ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ದಳದ ಹಿಂದೂ ಸಂಗಮ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಮಾತೆಯರು ವೀರ ಹನುಮಾನ್, ಪ್ರಭು ಶ್ರೀರಾಮಚಂದ್ರರ ಚರಿತ್ರೆಯನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ದೇಶ ಕಂಡಂತ ನಿಜವಾದ ಬಿಗ್ ಬಾಸ್ ಭಗತ್ ಸಿಂಗ್, ಸುಖದೇವ್, ಆಜಾದ್ ಚಂದ್ರಶೇಖರ್. ದೇಶಕ್ಕಾಗಿ ರಕ್ತ ಬಲಿದಾನ ನೀಡಿದ ಪ್ರತಿಯೊಬ್ಬರೂ ನಮಗೆ ಬಿಗ್ ಬಾಸ್‌ಗಳಾಗಿದ್ದಾರೆ. ಮಕ್ಕಳಿಗೆ ಓದು ಬರಹದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆಯಬೇಕೆಂದು ಒತ್ತಾಯ ಮಾಡಿ ಮಕ್ಕಳನ್ನು ಹಿಂಸಿಸುವುದನ್ನು ಬಿಟ್ಟು, ಅವರಲ್ಲಿ ಎಷ್ಟು ದೇಶ ಪ್ರೇಮ ಮೂಡಿಸಿದ್ದೀರಿ ಎಂದು ಆತ್ಮಾವಾಲೋಕನ ಮಾಡಿಕೊಳ್ಳಬೇಕಿದೆ ಎಂದರು. ಮಕ್ಕಳಲ್ಲಿ ದೇಶಭಕ್ತಿಯ ಅರಿವು ಮೂಡಿಸಬೇಕು. ದೇಶಕ್ಕಾಗಿ ಹೋರಾಡಿದವರನ್ನು ಸ್ಮರಿಸಿ ಅವರ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ಹಿಂದೂ ಸಂಸ್ಕೃತಿ ಬೆಳಗುತಿದೆ: ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮನೆ ಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಸಹಸ್ರಾರು ಋಷಿಮುನಿಗಳು ಯೋಗಿಗಳು ತ್ಯಾಗಿಗಳು ಹಾಗೂ ಸಂತರು ಮನುಕುಲದ ಒಳಿತಿಗೆ ಶ್ರಮಿಸಿದ್ದಾರೆ. ಅಲ್ಲದೆ ಭಾರತ ಧಾರ್ಮಿಕ ಇತಿಹಾಸ ಹೊಂದಿದ ರಾಷ್ಟ್ರವಾಗಿದೆ. ಹಿಂದುಗಳಲ್ಲರೂ ಒಗ್ಗಟ್ಟಿನಿಂದ ಇರಬೇಕು. ಈಗ ನಮ್ಮ ಸನಾತನ ಸಂಸ್ಕೃತಿ ಹಿಂದೂ ಸಂಸ್ಕೃತಿ ಸೂರ್ಯನ ರೀತಿ ಉಜ್ವಲವಾಗಿ ಬೆಳಗುತಿದೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳವೇ ಸಾಕ್ಷಿ. ಹಿಂದೂ ಧರ್ಮ ಹುಟ್ಟಿಲ್ಲ ಹಾಗಾಗಿ ಇದಕ್ಕೆ ಸಾವೇ ಇಲ್ಲ ಎಂದು ನಾನು ತಿಳಿದಿದ್ದೇನೆ. ಎಲ್ಲರೂ ಇದನ್ನು ತಿಳಿಯಬೇಕಿದೆ ಎಂದರು.
ಗಮನಸೆಳೆದ ಟ್ಯಾಬ್ಲೋ: ಕಾರ್ಯಕ್ರಮಕ್ಕೂ ಮೊದಲು ತಣ್ಣೀರು ಹಳ್ಳ ಬಸವೇಶ್ವರ ದೇವಾಲಯದಿಂದ ಅಬ್ಬೂರುಕಟ್ಟೆ ಜಂಕ್ಷನ್ ವರೆಗೂ ವಿವಿಧ ರೀತಿಯ ಟ್ಯಾಬ್ಲೋಗಳು, ಚಂಡೆ ವಾದ್ಯ, ಮಕ್ಕಳ ನೃತ್ಯದೊಂದಿಗೆ ಶೋಭಾಯಾತ್ರೆ ನಡೆಸಲಾಯಿತು. ವೇದಿಕೆಯಲ್ಲಿ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಪಿ.ಡಿ. ಪ್ರಕಾಶ್ ಪ್ರಮುಖರಾದ ಕೆ.ಎನ್. ಪಾಪಯ್ಯ, ಪಿ.ಇ. ಚಂದ್ರಾಜು ನೇರುಗಳಲೆ, ರೂಪ ಸತೀಶ್, ಕಾವೇರಿ ಹೊಸಳ್ಳಿ ಹಾಗೂ ಜೆ.ಜೆ. ರಮೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.