ಜಗಳದಲ್ಲಿ ಹಲ್ಲೆಗೊಳಗಾಗಿದ್ದ ಬಿಹಾರಿಯುವಕ ಸಾವು: ಒಬ್ಬನ ಬಂಧನ

KannadaprabhaNewsNetwork |  
Published : Sep 15, 2025, 01:00 AM IST

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ಹಲ್ಲೆಗೊಳಗಾಗಿದ್ದ ಯುವಕ ಮೂರು ದಿನಗಳ ಬಳಿಕ ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ಹಲ್ಲೆಗೊಳಗಾಗಿದ್ದ ಯುವಕ ಮೂರು ದಿನಗಳ ಬಳಿಕ ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಭೀಮಕುಮಾರ್‌ (25) ಮೃತ ದುರ್ದೈವಿ. ಸೆ.7ರಂದು ಅರಕೆರೆ ಬಳಿ ಲಕ್ಷ್ಮೀ ಲೇಔಟ್‌ನಲ್ಲಿ ಹಲ್ಲೆ ಮಾಡಲಾಗಿತ್ತು. ಸೆ.10ರಂದು ಬಿಳೇಕಹಳ್ಳಿಯ ಅನುಗ್ರಹ ಲೇಔಟ್‌ನ ಕಾರ್ಮಿಕರ ಶೆಡ್‌ನಲ್ಲಿ ಭೀಮಕುಮಾರ್‌ ಮೃತಪಟ್ಟಿದ್ದಾನೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಲಕ್ಷ್ಮೀ ಲೇಔಟ್‌ ನಿವಾಸಿ ಆರೋಪಿ ಸಲ್ಮಾನ್‌(30) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ವಿವರ

ಬಿಹಾರ ಮೂಲದ ಭೀಮಕುಮಾರ್‌ ಹಾಗೂ ಸ್ನೇಹಿತರು ಕಳೆದ ಒಂದು ತಿಂಗಳಿಂದ ಅರಕೆರೆಯ ಲಕ್ಷ್ಮೀ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆ.7ರಂದು ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಭೀಮಕುಮಾರ್‌ ಅವರನ್ನು ಭೇಟಿಯಾಗಲು ಬಿಳೇಕಹಳ್ಳಿಯ ಅನುಗ್ರಹ ಲೇಔಟ್‌ನ ಸ್ನೇಹಿತರಾದ ಧೀರಜ್‌ ಮತ್ತು ಅರವಿಂದ ಕುಮಾರ್ ಬಂದಿದ್ದರು. ಕೆಲ ಕಾಲ ಮಾತುಕತೆ ನಡೆಸಿದ ನಂತರ ರಾತ್ರಿ ಸುಮಾರು 9 ಗಂಟೆಗೆ ಸ್ನೇಹಿತರಾದ ಧೀರಜ್‌ ಮತ್ತು ಅರವಿಂದ ಕುಮಾರ್‌ ಅವರನ್ನು ಕಳುಹಿಸಿಕೊಡಲು ಭೀಮಕುಮಾರ್‌ ನಿರ್ಮಾಣ ಹಂತದ ಕಟ್ಟಡದ ಸಮೀಪದ ಪಾನಿಪೂರಿ ಅಂಗಡಿ ಬಳಿಗೆ ಬಂದಿದ್ದಾನೆ.

ಮುಷ್ಟಿಯಿಂದ ಕುತ್ತಿಗೆಗೆ ಪಂಚ್‌:

ಈ ವೇಳೆ ರ್‍ಯಾಪಿಡೋ ಕ್ಯಾಬ್‌ ಬುಕ್‌ ಮಾಡಿ ಕ್ಯಾಬ್‌ಗಾಗಿ ಕಾಯುವಾಗ, ಅಲ್ಲೇ ಪಾನಿಪೂರಿ ತಿನ್ನುತ್ತಿದ್ದ ಸ್ಥಳೀಯ ನಿವಾಸಿ ಸಲ್ಮಾನ್‌ ಏಕಾಏಕಿ ಭೀಮಕುಮಾರ್‌, ಸ್ನೇಹಿತರಾದ ಧೀರಜ್‌, ಅರವಿಂದ ಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಭೀಮಕುಮಾರ್‌ ಪ್ರಶ್ನಿಸಿದಾಗ ಇಬ್ಬರ ನಡುವೆ ಜಗಳವಾಗಿ ತಳ್ಳಾಟ ನೂಕಾಟ ನಡೆದಿದೆ. ಬಳಿಕ ಭೀಮ ಕುಮಾರ್‌ ತನ್ನ ಸ್ನೇಹಿತರೊಂದಿಗೆ ನಿರ್ಮಾಣ ಹಂತದ ಕಟ್ಟಡದ ಕಡೆಗೆ ಹೊರಟಿದ್ದಾನೆ. ಈ ವೇಳೆ ಹಿಂಬಾಲಿಸಿ ಬಂದ ಸಲ್ಮಾನ್‌, ಮೊದಲಿಗೆ ಧೀರಜ್‌ ಮುಖಕ್ಕೆ ಕೈನಿಂದ ಗುದ್ದಿದ್ದಾನೆ. ಬಳಿಕ ಭೀಮಕುಮಾರ್‌ಗೆ ಕುತ್ತಿಗೆಗೆ ಮುಷ್ಟಿಯಿಂದ ಬಲವಾಗಿ ಗುದ್ದಿದ ಪರಿಣಾಮ ಭೀಮಕುಮಾರ್‌ ಹಿಮ್ಮುಖವಾಗಿ ರಸ್ತೆಗೆ ಬಿದ್ದು ಪ್ರಜ್ಞೆ ತಪ್ಪಿದ್ದಾನೆ.

ಮಲಗಿದ್ದಲ್ಲೇ ಸಾವು

ಬಳಿಕ ಸುಮಾರು 10 ನಿಮಿಷದ ಬಳಿಕ ಭೀಮಕುಮಾರ್‌ಗೆ ಪ್ರಜ್ಞೆ ಬಂದ ಹಿನ್ನೆಲೆಯಲ್ಲಿ ಸ್ನೇಹಿತರಾದ ಧೀರಜ್‌ ಮತ್ತು ಅರವಿಂದ ಕುಮಾರ್‌ ತಮ್ಮ ಅನುಗ್ರಹ ಲೇಔಟ್‌ನ ಕಾರ್ಮಿಕರ ಶೆಡ್‌ಗೆ ಕರೆದೊಯ್ದು ಆರೈಕೆ ಮಾಡಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಭೀಮಾಕುಮಾರ್‌ ಸೆ.10ರಂದು ಬೆಳಗ್ಗೆ ಎಚ್ಚರಗೊಂಡಿರಲಿಲ್ಲ. ಹೀಗಾಗಿ ಸ್ನೇಹಿತರು ಎಬ್ಬಿಸಲು ಮುಂದಾದಾಗ ಮಲಗಿದ್ದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ.

ಈ ಸಂಬಂಧ ಮೃತನ ಸ್ನೇಹಿತ ಅಂಜಕುಮಾರ್‌ ಮೈಕೋ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಘಟನೆ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗೆ ವರ್ಗವಾಗಿದೆ. ಬಳಿಕ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿ ಸಲ್ಮಾನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ