ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಅಭಿವೃದ್ಧಿ: ಹಲವೆಡೆ ಭೂಕುಸಿತ!

KannadaprabhaNewsNetwork |  
Published : Aug 06, 2026, 03:00 AM IST
ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಶಿಬ್ರಕೆರೆ ಮತ್ತು ಕೆತ್ತಿಕಲ್‌ ಪ್ರದೇಶದ ದೃಶ್ಯ | Kannada Prabha

ಸಾರಾಂಶ

ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವು ಅಡೆ-ತಡೆಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಿರೀಕ್ಷಿತ ವೇಗ ಪಡೆದಿಲ್ಲ. ಹೆದ್ದಾರಿ ಸಾಗುವ ಹಲವೆಡೆ ಮಣ್ಣು ಕುಸಿತದ್ದೇ ಆತಂಕ ಸ್ಥಿತಿ ಮಳೆಗಾಲದಲ್ಲಿದೆ.

ದಯಾನಂದ ಕಲ್ನಾರ್‌

ಮಂಗಳೂರು: ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವು ಅಡೆ-ತಡೆಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಿರೀಕ್ಷಿತ ವೇಗ ಪಡೆದಿಲ್ಲ. ಹೆದ್ದಾರಿ ಸಾಗುವ ಹಲವೆಡೆ ಮಣ್ಣು ಕುಸಿತದ್ದೇ ಆತಂಕ ಸ್ಥಿತಿ ಮಳೆಗಾಲದಲ್ಲಿದೆ.

ಮಂಗಳೂರಿನಿಂದ ಉಡುಪಿಯ ಕಾರ್ಕಳ ಸಂಪರ್ಕಿಸುವ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2022ರ ಅಕ್ಟೋಬರ್‌ನಲ್ಲಿ ಕಾರ್ಯಾದೇಶ ಮಾಡಿತ್ತು. ಸುಮಾರು 45 ಕಿ.ಮೀ.ನ ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಭಾರತ್‌ಮಾಲಾ ಪರಿಯೋಜನೆ ಪ್ಯಾಕೇಜ್‌ 3ರ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಮಣ್ಣು ಕುಸಿತದ್ದೇ ಆತಂಕ: ಈ ಹೆದ್ದಾರಿಯ ಎಡಪದವು ಬಳಿಯ ಶಿಬ್ರಕೆರೆ ಎಂಬಲ್ಲಿ ಹೆದ್ದಾರಿಯ ಬದಿ ನೀರು ಹರಿವಿಗೆ ಸಮರ್ಪಕ ವ್ಯವಸ್ಥೆ ಇಲ್ಲದೇ ಎಕರೆಗಟ್ಟಲೇ ತೋಟ ಕಳೆದ 40 ದಿನಗಳಿಂದ ನೀರಲ್ಲಿ ಮುಳುಗಿದ್ದು, ಕೆಲ ದಿನಗಳ ಹಿಂದೆ ತೋಟದ ಭಾಗದಲ್ಲಿ ಹೆದ್ದಾರಿ ಮಣ್ಣು ಕೂಡ ಕುಸಿತವಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ಮಣ್ಣು ಕುಸಿತ ಆಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಇಲ್ಲಿ ಮಾತ್ರವಲ್ಲದೇ ಗಂಜಿಮಠ ಪೇಟೆ ಸಮೀಪ, ವಾಮಂಜೂರು ಸಮೀಪದ ಕೆತ್ತಿಕಲ್‌ ಭಾಗದಲ್ಲೂ ಹೆದ್ದಾರಿ ಬದಿಯಲ್ಲಿ ಹಾಗೂ ಇನ್ನೂ ಕೆಲವೆಡೆ ಮಣ್ಣು ಕುಸಿತ ಆತಂಕ ಸ್ಥಿತಿ ಕಳೆದ ಕೆಲವು ವರ್ಷಗಳಿಂದ ಜೀವಂತವಾಗಿದೆ. ಮಳೆಗಾಲದಲ್ಲಿ ಆತಂಕದ ಸ್ಥಿತಿ ಇಲ್ಲಿರುತ್ತದೆ.ಹಾನಿಗೆ ಪರಿಹಾರಕ್ಕೆ ಆಗ್ರಹ: ಮಣ್ಣು ಕುಸಿತ ಕಡೆಗಳಲ್ಲಿ ಮಳೆಗಾಲ ಆರಂಭವಾಗುವ ಕೆಲವು ಸಮಯದ ಮೊದಲು ಪರಿಹಾರ ಕಾಮಗಾರಿ ಆರಂಭಿಸಿ ಬಳಿಕ ಕಾಮಗಾರಿ ವೇಗ ಕಳೆದುಕೊಳ್ಳುತ್ತದೆ. ಮಣ್ಣು ಕುಸಿತದ ವೇಳೆ ಮತ್ತೆ ಕೆಲವು ಕಾಲ ದುರಸ್ತಿ ನೆಪದ ಕಾಮಗಾರಿ ನಡೆಸಲಾಗುತ್ತದೆ. ಶಾಶ್ವತ ಪರಿಹಾರ ಕಾಮಗಾರಿ ವೇಗ ಪಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಹೆದ್ದಾರಿಯ ಪ್ರಮುಖ ಪೇಟೆಗಳಲ್ಲಿ ಹಾಗೂ ಪ್ರಮುಖ ಕಡೆಗಳಲ್ಲಿ ಸರ್ವೀಸ್‌ ರಸ್ತೆಗಳ ನಿರ್ಮಾಣ, ಸರ್ವೀಸ್‌ ರಸ್ತೆಗಳ ದುರಸ್ತಿ, ಕಾಮಗಾರಿ ವೇಳೆ ಸಮರ್ಪಕ ಸೂಚನಾ ಫಲಕ, ಸುರಕ್ಷತೆಗೆ ಆದ್ಯತೆ ಮೊದಲಾದ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು ಎನ್ನುತ್ತಾರೆ ಸ್ಥಳೀಯರು. ಮಣ್ಣು ಕುಸಿತದ ಪ್ರದೇಶಗಳಲ್ಲಿ ಮಣ್ಣು ಕುಸಿತ ತಡೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ನೆಲೆಯಲ್ಲಿ ಪೂರ್ಣಗೊಳಿಸಬೇಕು. ಹೆದ್ದಾರಿ ಕಾಮಗಾರಿಯಿಂದ ಆಗುವ ಕೃಷಿ ಹಾಗೂ ಇತರೆ ಹಾನಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

1,137 ಕೋಟಿ ರು. ವೆಚ್ಚದ ಯೋಜನೆ: ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಅಭಿವೃದ್ಧಿಯಲ್ಲಿ ಭೂಸ್ವಾಧೀನ ವೆಚ್ಚ ಹೊರತುಪಡಿಸಿ ಸುಮಾರು 1,137 ಕೋಟಿ ರು. ವೆಚದ್ದಲ್ಲಿ ಕಾಮಗಾರಿ ನಡೆಯುತ್ತಿದೆ. ಬೋಪಾಲ್‌ನ ಮೇ.ದಿಲೀಪ್‌ ಬಿಲ್ಡಿಕಾನ್‌ ಲಿ. ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದಿದೆ. ಚತುಷ್ಪತ ನಿರ್ಮಾಣ ಪೂರ್ವದ ಭೂಸ್ವಾಧೀನ ಪ್ರಕ್ರಿಯೆಯಂತೆ ಸಲ್ಲಿಕೆಯಾದ1,534 ಅರ್ಜಿಗೆ 585 ಕೋಟಿ ರು. ಪರಿಹಾರ ವಿತರಣೆ ಆಗಿದೆ. ಯೋಜನೆಗೆ ಒಟ್ಟು 222.11 ಹೆಕ್ಟೆರ್‌ ಭೂಮಿ ಅಗತ್ಯವಾಗಿತ್ತು, 85.6 ಹೆಕ್ಟೆರ್‌ ಸರ್ಕಾರಿ ಹಾಗೂ 29 ಹೆಕ್ಟೇರ್‌ ಹಿಂದೆ ಇದ್ದ ಹೆದ್ದಾರಿ ಜಮೀನು ಬಳಕೆ ಮಾಡಲಾಗಿದೆ. ಉಳಿದ ಜಮೀನು ಖಾಸಗಿಯಿಂದ ಸ್ವಾಧೀನ ಮಾಡಲಾಗಿದೆ.

ಕೋಟ್‌-1

ಸಾಣೂರು-ಬಿಕರ್ಣಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಲು ಸ್ವಲ್ಪ ಸಮಸ್ಯೆಗಳಾಗುತ್ತದೆ. ಒಟ್ಟು ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಸ್ಥಳೀಯರ ಬೇಡಿಕೆ ಆಲಿಸಲಾಗುತ್ತಿದೆ. ಈಗಾಗಲೇ ಶೇ.75ರಷ್ಟು ಕಾಮಗಾರಿ ಪ್ರಗತಿಯಾಗಿದೆ. ಹೆದ್ದಾರಿಯ ಮಣ್ಣು ಕುಸಿತ ಪ್ರದೇಶಗಳಲ್ಲಿ ತಡೆಗೋಡೆ ಹಾಗೂ ಕುಸಿತ ತಡೆಗೆ ಪರಿಹಾರ ಕಾಮಗಾರಿಗಳು ನಡೆಸಲಾಗುತ್ತಿದೆ.

-ಅಬ್ದುಲ್‌ ಜಾವೇದ್‌ ಅಜ್ಮಿ, ಪಿಡಿ-ಎನ್‌ಎಚ್‌ಎಐ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಡಿಪಿಒ ಹುದ್ದೆಗೆ ಇಬ್ಬರ ಕಾದಾಟ!
ಪತ್ರಕರ್ತರು ಜನಸಾಮಾನ್ಯರ ಧ್ವನಿ