ವಾಲ್ಮೀಕಿ ಜಯಂತಿ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ

KannadaprabhaNewsNetwork | Published : Oct 27, 2023 12:31 AM

ಸಾರಾಂಶ

ವಾಲ್ಮೀಕಿ ಜಯಂತಿ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ6ನೇ ವರ್ಷದ ರ‍್ಯಾಲಿಗೆ ಜಗದ್ಗುರು ಪ್ರಸನ್ನಾನಂದಪುರಿ ಶ್ರೀಗಳಿಂದ ಚಾಲನೆ । ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಣೆ
6ನೇ ವರ್ಷದ ರ‍್ಯಾಲಿಗೆ ಜಗದ್ಗುರು ಪ್ರಸನ್ನಾನಂದಪುರಿ ಶ್ರೀಗಳಿಂದ ಚಾಲನೆ । ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಣೆ ಕನ್ನಡಪ್ರಭ ವಾರ್ತೆ ದಾವಣಗೆರೆ ಆದಿಕವಿ ವಾಲ್ಮೀಕಿ ಮಹರ್ಷಿ ತಮ್ಮ ಬದುಕಿನಲ್ಲಿ ಪರಿವರ್ತನೆಯಾಗುವ ಮೂಲಕ ಮಹತ್ತರವಾದ ಸಾಧನೆಯನ್ನು ಮಾಡಿರುವ ಮಹಾನ್ ತಪಸ್ವಿಯಾಗಿದ್ದಾರೆ. ತಮ್ಮ ಆತ್ಮಕಲ್ಯಾಣವನ್ನು ಮಾಡಿಕೊಳ್ಳುವುದರ ಜೊತೆಗೆ ಲೋಕಕಲ್ಯಾಣಾರ್ಥವಾಗಿ ರಾಮಾಯಣ ಮಹಾಕಾವ್ಯ ರಚನೆ ಮಾಡಿದರು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು. ನಗರದ ವೀರಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್)ನಲ್ಲಿ ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದಿಂದ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ 6ನೇ ವರ್ಷದ ಬೃಹತ್ ಬೈಕ್ ರ‍್ಯಾಲಿಗೆ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ರ‍್ಯಾಲಿಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು. ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ಇಂದು ದಾವಣಗೆರೆಯಲ್ಲಿರುವಂತಹ ಎಲ್ಲಾ ಮಹನೀಯರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಮ್ಮ ಸಮುದಾಯದ ಎಲ್ಲ ಯುವಕರು ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಆದಿಕವಿ ಮಹರ್ಷಿ ವಾಲ್ಮಿಕಿಯವರ ಜಯಂತಿ, ಹುಟ್ಟುಹಬ್ಬವನ್ನು ಇದೇ 28ರಂದು ಕರ್ನಾಟಕ ರಾಜ್ಯ ಸರ್ಕಾರ ಆಚರಣೆ ಮಾಡುತ್ತಾ ಇದೆ. ಸರ್ಕಾರದ ಆಚರಣೆಯೊಂದಿಗೆ ನಮ್ಮ ಸಮಾಜದ ಸಹಕಾರವನ್ನು ನೀಡಿ ಈ ಕಾರ್ಯಕ್ರಮವನ್ನು ಎಲ್ಲರೂ ಕೂಡಾ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕ ಸಮಾಜವು ಸುಮಾರು 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಅಧಿಕಾರದಿಂದ ವಂಚಿತರಾಗಿದ್ದೇವೆ. ಯುವ ಜನತೆ ಸಮಾಜ ಕಟ್ಟುವ ಮೂಲಕ ಒಂದು ಶಕ್ತಿಯಾಗಬೇಕು ಎಂದರು. ಸಮಾಜದ ಹಿರಿಯರಾದ ಅಂಜನೇಯ ಗುರೂಜಿ ಮಾತನಾಡಿ, ನಮ್ಮ ಸಮಾಜ ಸಂಘಟನೆಯಾಗಬೇಕು, ಶಿಸ್ತಿನಿಂದ ಇರಬೇಕು, ಗುರುಗಳ ಮಾರ್ಗದರ್ಶನ, ಆಶೀರ್ವಾದ ಪಡೆಯಬೇಕು. ನಮ್ಮ ಶಕ್ತಿ ಹೋರಾಟ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಬೆಳೆಯಬೇಕಾಗಿದೆ. ಇಂದಿನ ದಿನಗಳಲ್ಲಿ ನಮ್ಮ ಮಕ್ಕಳ ಕೈಯಲ್ಲಿ ಖಡ್ಗ ಕೊಡುವಂತಿಲ್ಲ, ಪೆನ್ನು ಪೇಪರ್ ಕೊಡಬೇಕು. ಅವರು ಬುದ್ಧಿವಂತರಾಗಬೇಕು, ಐಎಎಸ್, ಐಪಿಎಸ್ ಆಗಬೇಕು. ಈ ರಾಷ್ಟ್ರದ, ಯಾವುದೇ ಭಾಗಕ್ಕೆ ಹೋದರು ಸಹ ಒಬ್ಬ ನಾಯಕ, ಒಬ್ಬ ವಾಲ್ಮಿಕಿ ಬೆಳೆಯುವಂತಾಗಬೇಕು ಎಂದರು. ಈ ರ‍್ಯಾಲಿಯಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಚ್. ವಿನಾಯಕ, ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ಡಿ.ಜಿ. ಮಂಜುನಾಥ, ಶ್ರೀನಿವಾಸ ದಾಸಕರಿಯಪ್ಪ, ಕರೂರು ಹನುಮಂತಪ್ಪ, ಶಾಮನೂರು ಪ್ರವೀಣ, ಪಣಿಯಾಪುರ ಲಿಂಗರಾಜ, ಹದಡಿ ಹಾಲಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ, ಆವರಗೆರೆ ವಾಸು, ಎಂ.ಟಿ. ಸುಭಾಷ್‌ಚಂದ್ರ, ಧರ್ಮಣ್ಣ, ಸುರೇಶ, ಪ್ರಶಾಂತ ಪಚ್ಚಿ, ಬಸವರಾಜ ತೋಟದ, ಆವರಗೆರೆ ಸುರೇಶ ಸೇರಿದಂತೆ ಇತರರು ಇದ್ದರು. ದಾವಣಗೆರೆ ಜಿಲ್ಲೆಯ ವಿವಿಧೆಡೆಯಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ರ‍್ಯಾಲಿಯು ಹೊಂಡದ ಸರ್ಕಲ್‌ನಿಂದ ಹೊರಟು ದುರ್ಗಾಂಬಿಕಾ ದೇವಸ್ಥಾನ, ಹಗೇದಿಬ್ಬ ಸರ್ಕಲ್, ಅರುಣಾ ಚಿತ್ರಮಂದಿರ ಸರ್ಕಲ್, ವಿನೋಬನಗರ 2 ನೇ ಮುಖ್ಯ ರಸ್ತೆ, ಚರ್ಚ್ ರಸ್ತೆ, ಮೂಲಕ ವಿವಿಧ ರಸ್ತೆಗಳಲ್ಲಿ ಸಾಗಿತು. - - - ಫೋಟೋ ಬರಲಿವೆ

Share this article