ರಸ್ತೆಯಲ್ಲಿ ಬೈಕ್‌ ಸಾಹಸ, ಯುವಕನಿಗೆ ಎಚ್ಚರಿಕೆ ನೀಡಿದ ಮಹಿಳೆಯರು!

KannadaprabhaNewsNetwork | Updated : Dec 26 2023, 01:32 AM IST

ಸಾರಾಂಶ

ಕನಕಗಿರಿ ಪಟ್ಟಣದ ಓಣಿಗಳಲ್ಲಿ ಬೈಕ್ ಸಾಹಸ ಮಾಡುತ್ತಿದ್ದ ಯುವಕನ್ನು ತಡೆದ ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಮ್ಮೆ ಇಂತಹ ಸಾಹಸ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಕನಕಗಿರಿ: ಬೈಕ್ ಸ್ಟಂಟ್ ಮಾಡುತ್ತಾ ಯರ‍್ರಾಬಿರ‍್ರಿ ಚಲಾಯಿಸುತ್ತಿದ್ದ ಯುವಕನೊಬ್ಬನಿಗೆ ಮಹಿಳೆಯರು ಎಚ್ಚರಿಕೆ ನೀಡಿದ ಘಟನೆ ೧೧ ಹಾಗೂ ೧೨ನೇ ವಾರ್ಡಿನಲ್ಲಿ ಸೋಮವಾರ ನಡೆದಿದೆ.ಹಲವು ತಿಂಗಳುಗಳಿಂದ ಓಣಿಗಳಲ್ಲಿ ಬೈಕ್ ಸ್ಟಂಟ್ ಮಾಡುತ್ತಾ ವೇಗವಾಗಿ ಚಲಾಯಿಸುತ್ತಿದ್ದ ಇಲ್ಲಿನ ಕೆಇಬಿ ಕಾಲನಿ ಯುವಕ ಕನಕಾಚಲ ಎಂಬಾತನ ಬೈಕ್ ಅಡ್ಡಗಟ್ಟಿದ ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಓಣಿ ರಸ್ತೆಗಳು ಚಿಕ್ಕದಾಗಿದ್ದು, ತಿರುವುಗಳಿವೆ. ಓಣಿಯ ಅಲ್ಲಲ್ಲಿ ಮಕ್ಕಳು ಆಟವಾಡಿಕೊಂಡಿರುತ್ತಾರೆ. ಪದವಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇಲ್ಲಿಂದಲೇ ಹೋಗುತ್ತಿರುವಾಗಲೂ ಬೈಕ್‌ನ್ನು ವೇಗವಾಗಿ ಓಡಿಸುವುದು ಮತ್ತು ಸ್ಟಂಟ್ ಮಾಡುವುದು ನಡೆದಿದೆ. ಓಣಿಗಳಲ್ಲಿನ ಮಹಿಳೆಯರು ಈ ಯುವಕನಿಗೆ ಹಲವು ಬಾರಿ ತಿಳಿಸಿ ಹೇಳಿದರೂ ಕೇಳದೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಸೋಮವಾರ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಬೈಕ್‌ನ್ನು ವೇಗವಾಗಿ ಓಡಿಸುತ್ತಿರುವುದನ್ನು ಗಮನಿಸಿದ ೧೧ ಹಾಗೂ ೧೨ನೇ ಮಹಿಳೆಯರು ಯುವಕನನ್ನು ಸುತ್ತುವರಿದು ಬೈಕ್ ನಿಧಾನವಾಗಿ ಓಡಿಸಬೇಕು, ಇಲ್ಲವಾದರೆ ಧರ್ಮದೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಸಿ ಕಳುಹಿಸಿದ್ದಾರೆ. ಶಾಲಾ-ಕಾಲೇಜು ಹೋಗುವ ರಸ್ತೆಗಳಲ್ಲಿಯೂ ಸ್ಟಂಟ್ ನಡೆಸಿ ಜೋರಾಗಿ ಬೈಕ್ ಚಲಾಯಿಸುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಹೀಗೆ ದಿನ ನಿತ್ಯವೂ ಶಾಲಾ-ಕಾಲೇಜು ರಸ್ತೆಗಳಲ್ಲಿ ಪುಡಾರಿಗಳು ಬೈಕ್ ವೇಗವಾಗಿ ಓಡಿಸುವುದು ನಡೆದಿದ್ದು, ಇಷ್ಟೆಲ್ಲ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆಂದು ಮಹಿಳೆಯರು ಆರೋಪಿಸಿದರು.ಕೆಲವು ತಿಂಗಳುಗಳ ಹಿಂದೆ ಅತಿ ವೇಗವಾಗಿ ಬೈಕ್ ಓಡಿಸಿದ್ದರ ಪರಿಣಾಮ ಅಪಘಾತ ಸಂಭವಿಸಿ ಇದೇ ಯುವಕನಿಗೆ ಗಂಭೀರ ಗಾಯಗಳಾಗಿದ್ದವು. ಆದರೂ ಮತ್ತದೇ ಚಾಳಿ ಮುಂದುವರಿಸಿದ್ದಾನೆ ಎಂದು ಸ್ಥಳೀಯರು ಹೇಳಿದರು. ಎಸ್ಪಿ ಮೇಡಂ ಕ್ರಮ ಕೈಗೊಳ್ಳಿ: ಬೈಕ್ ಸ್ಟಂಟ್ ಜತೆಗೆ ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದೆ. ಈ ರೀತಿಯ ಘಟನೆಗಳು ಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಪುಂಡರ ತಂಡವೊಂದು ಯರ‍್ರಾಬಿರ‍್ರಿ ಬೈಕ್ ಚಲಾಯಿಸುತ್ತಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ಕೂಡಾ ಭಯದ ವಾತಾವರಣದಲ್ಲಿದ್ದು, ಈ ಪುಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಹಿಳೆಯರು ಮನವಿ ಮಾಡಿದ್ದಾರೆ.

Share this article