ಮಳೆ ನೀರಿಗೆ ಕೊಚ್ಚಿಹೋದ ಬೈಕ್‌: ಪೊಲೀಸರಿಂದ ಬದುಕುಳಿದ ಜೀವ

KannadaprabhaNewsNetwork | Published : May 21, 2024 12:37 AM

ಸಾರಾಂಶ

ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯೊಂದರ ಬಳಿ ಭಾರೀ ಮಳೆಯಿಂದ ರಸ್ತೆ ಮೇಲೆಯೇ ನೀರು ಹರಿಯುತ್ತಿತ್ತು. ಗುಡ್ಡದ ಮೇಲೆ ಬಿದ್ದ ಮಳೆಯ ನೀರು ರಸ್ತೆ ಕ್ರಾಸ್‌ ಮಾಡಿ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಈ ವೇಳೆ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಪ್ರದೀಪ್‌ ಎಂಬವರು ತಮ್ಮ ಬೈಕ್‌ನಲ್ಲಿ ನ್ಯಾಮತಿಯ ದೊಡ್ಡೆತ್ತಿನಳ್ಳಿಯ ಕಡೆಗೆ ಹೊರಟಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡಿನಲ್ಲಿ ಮಳೆಗಾಲ ಶುರುವಾದರೆ ಸಾಕು ಅವಘಡ, ಅಪಘಾತ ಘಟನೆ ಸಾಕಷ್ಟು ನಡೆಯುತ್ತಲೇ ಇರುತ್ತವೆ. ಅಂತಹದ್ದೆ ಘಟನೆ ಶಿವಮೊಗ್ಗದಲ್ಲಿ ಭಾನುವಾರವೂ ಸಂಭವಿಸಿದ್ದು, ಪೊಲೀಸ್‌ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಸಾಹಸದಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಒಬ್ಬ ಯುವಕನ ಜೀವ ಉಳಿದಿದೆ!

ಭಾನುವಾರ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯೊಂದರ ಬಳಿ ಭಾರೀ ಮಳೆಯಿಂದ ರಸ್ತೆ ಮೇಲೆಯೇ ನೀರು ಹರಿಯುತ್ತಿತ್ತು. ಗುಡ್ಡದ ಮೇಲೆ ಬಿದ್ದ ಮಳೆಯ ನೀರು ರಸ್ತೆ ಕ್ರಾಸ್‌ ಮಾಡಿ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಈ ವೇಳೆ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಪ್ರದೀಪ್‌ ಎಂಬವರು ತಮ್ಮ ಬೈಕ್‌ನಲ್ಲಿ ನ್ಯಾಮತಿಯ ದೊಡ್ಡೆತ್ತಿನಳ್ಳಿಯ ಕಡೆಗೆ ಹೊರಟಿದ್ದರು. ಮಳೆ ಜೋರಾಗಿ ರಸ್ತೆಯ ಮೇಲೆ ಹರಿದೆ. ಆದರೆ, ನೀರಿನ ರಭಸ ಅರಿಯದ ಅವರು ಪಯಣ ಮುಂದುವರಿಸಿದ್ದಾರೆ. ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ರಸ್ತೆಯ ಪಕ್ಕದಲ್ಲಿದ್ದ ಪ್ಲಾಂಟ್‌ನೊಳಗೆ ಹೋಗಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಓರ್ವರು 112 ಪೊಲೀಸರಿಗೆ ಕರೆ ಮಾಡಿದ್ದಾರೆ. ಇಷ್ಟಾಗುವ ಹೊತ್ತಿಗೆ ಗಂಟೆ ರಾತ್ರಿ 11.30 ಆಗಿದೆ. 112 ಮೂಲಕ ಕರೆ ಸ್ವೀಕರಿಸಿದ ರೆಸ್ಪಾಂಡೆಂಟ್‌ ರಂಗನಾಥ್‌ ಹಾಗೂ ಡ್ರೈವರ್‌ ಪ್ರಸನ್ನರವರು ಕರೆ ಮಾಡಿದ ವ್ಯಕ್ತಿಯ ಸಂಪರ್ಕ ಮಾಡಲು ಯತ್ನಿಸಿದ್ದಾರೆ. ಆದರೆ, ಮಾಹಿತಿ ನೀಡಿದ್ದ ವ್ಯಕ್ತಿಯ ಮೊಬೈಲ್‌ ಸ್ವಿಚ್‌ ಎಂದು ಬಂದಾಗ ಇದು ಫೇಕ್‌ ಕಾಲ್‌ ಇರಬಹುದು ಎಂದು ಭಾವಿಸಿದರೂ ನಿರ್ಲಕ್ಷ್ಯ ಮಾಡದೆ ಕೆಲವೇ ಸ್ಥಳಕ್ಕೆ ಬಂದಿದ್ದಾರೆ. ಆಗ ವೃದ್ಧರು ನಿಂತುಕೊಂಡು ಕೊಚ್ಚಿ ಹೋಗಿದ್ದ ರಕ್ಷಣೆಗೆ ಮುಂದಾಗಿರುವುದು ಕಂಡು ಖುದ್ದು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇತ್ತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರದೀಪ್‌, ಮರದ ಪೊಟರೆಯ ಬಳಿ ಆಸರೆ ಪಡೆದು ಸಹಾಯಕ್ಕಾಗಿ ಕೂಗುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ 112 ಸಿಬ್ಬಂದಿ ರಂಗನಾಥ್‌ ಹಾಗೂ ಪ್ರಸನ್ನ ಅವರನ್ನ ಬಚಾವ್‌ ಮಾಡಿದ್ದಾರೆ. ಆ ಬಳಿಕ ಪ್ರದೀಪ್‌ರ ಯೋಗಕ್ಷೇಮ ವಿಚಾರಿಸಿ ಅವರ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಈ ನಡುವೆ ಪ್ರದೀಪ್‌ರವರು ನೀರಿನಲ್ಲಿ ಕೊಚ್ಚಿ ಹೋಗುವ ಸಂದರ್ಭದಲ್ಲಿ ಅವರ ಬೈಕ್‌ ಕೂಡ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಮೂರು ಅಡಿ ನೀರಿದ್ದರಿಂದ ರಾತ್ರಿ ಬೈಕ್‌ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ 112 ಸಿಬ್ಬಂದಿ ನೀರು ಹರಿದ ಪ್ರದೇಶದಲ್ಲಿ ಬೈಕ್‌ ಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದ ಜಾಗದಿಂದ ಸುಮಾರು ದೂರ ಕೊಚ್ಚಿ ಹೋಗಿ ಮರವೊಂದರ ಬುಡದಲ್ಲಿ ಬಿದ್ದಿದ್ದ ಬೈಕ್‌ ಪತ್ತೆಯಾಗಿದೆ.

ಪೊಲೀಸ್‌ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುವುದು ಅನಿವಾರ್ಯತೆಯ ಹೊಣೆ. ಆದರೆ, ತಡರಾತ್ರಿಯ ಸಂದರ್ಭದಲ್ಲಿ ಯಾರೊಬ್ಬರು ಸಹಾಯಕ್ಕೆ ಸಿಗುವ ಭರವಸೆ ಇಲ್ಲದ ಹೊತ್ತಿನಲ್ಲಿ ರಂಗನಾಥ್‌ ಹಾಗೂ ಪ್ರಸನ್ನ ನಡೆಸಿದ ಈ ಕಾರ್ಯಾಚರಣೆ ನಿಜಕ್ಕೂ ‍ಶ್ಲಾಘನೀಯ.----ಹನುಮಂತಾಪುರದಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು

ಹೊಳೆಹೊನ್ನೂರು : ಪಟ್ಟಣ ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಸುರಿಯುತ್ತಿರುವ ಮಳೆಯಿಂದ ಚರಂಡಿ ನೀರು ಮನೆಗೆ ನುಗ್ಗಿ ಜನರು ತುಂಬಾ ತೊಂದರೆ ಅನುಭವಿಸುವಂತೆ ಆಯಿತು.

ಮುಂಗಾರು ಮಳೆ ಆರಂಭಕ್ಕೂ ಮುನ್ನಾ ಮಳೆ ಆರಂಭವಾಗಿದೆ. ಹನುಮಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಾಪುರ ಗ್ರಾಮದ ಎಸ್‍ಸಿ ಕಾಲನಿಯಲ್ಲಿ ರಸ್ತೆ ಇಕ್ಕೆಲ ಈ ಹಿಂದೆ ಚರಂಡಿ ಮಾಡಲಾಗಿದೆ. ಆದರೆ ಚರಂಡಿ ದುರಸ್ತಿ ಆಗದೆ ಚರಂಡಿಯಲ್ಲಿ ಮಣ್ಣು, ಕಸ ಹಾಗೂ ಪ್ಲಾಸ್ಟಿಕ್ ತುಂಬಿ ಚರಂಡಿ ಮುಚ್ಚಿಕೊಂಡಿದೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಎತ್ತರದ ಪ್ರದೇಶದಿಂದ ಚರಂಡಿ ಮೂಲಕ ನೀರು ಮುಂದೆ ಹರಿದು ಹೋಗಲು ಸಾಧ್ಯವಾಗದೆ ಕಸಕಡ್ಡಿ, ಕೊಳಚೆಯೊಂದಿಗೆ ಚರಂಡಿ ನೀರು ರಸ್ತೆ ಮೇಲೆ ಹರಿದು ಕೆಳಗಿನ ಮನೆಗಳಿಗದ ನುಗ್ಗಿದೆ. ಇದರಿಂದ ಚರಂಡಿಯ ಕೊಳಚೆ ಬಂದು ಮನೆ ಮುಂದೆ ಸಂಗ್ರಹವಾಗಿದೆ. ಈ ಕೊಳೆತ ಕಸದ ದುರ್ವಾಸನೆಯಿಂದ ನಿವಾಸಿಗಳಿಗೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಚರಂಡಿ ಸ್ವಚ್ಛಗೊಳಿಸುವಂತೆ ಸ್ಥಳೀಯರು ಗ್ರಾಮ ಪಂಚಾಯಿತಿಗೆ ಈಗಾಗಲೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿಲ್ಲ. ತಕ್ಷಣ ಗ್ರಾಮ ಪಂಚಾಯಿತಿಯವರು ಚರಂಡಿ ದುರಸ್ತಿ ಮಾಡಿ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Share this article