ಸಂತೋಷ ದೈವಜ್ಞ
ಮುಂಡಗೋಡ: ಶಿವನಿಗೆ ಅತಿ ಪ್ರಿಯವಾದ ಬಿಲ್ವ ಪತ್ರೆ ಗಿಡಗಳು ಕೆಲ ಪೂಜಾ ಸಂದರ್ಭದಲ್ಲಿ ಹುಡುಕಾಡಿದರೂ ಸುಲಭವಾಗಿ ಸಿಗುವುದು ಕಷ್ಟ. ಆದರೆ ಇಲ್ಲಿಯ ಪಾರ್ವತಿ ಪರಮೇಶ್ವರ ದೇವಾಲಯ ಸುತ್ತ ಸಹಸ್ರ ಸಂಖ್ಯೆಯಲ್ಲಿ ಬಿಲ್ವ ಪತ್ರೆ ಗಿಡಗಳು ಬೆಳೆದು ನಿಂತಿವೆ.ಪಟ್ಟಣದ ಹೊರವಲಯದ ಕೈಗಾ-ಇಳಕಲ್ ಹೆದ್ದಾರಿ ಮುಂಡಗೋಡ-ಬಂಕಾಪುರ ಮಾರ್ಗ ಮಧ್ಯದಲ್ಲಿರುವ ಪಾರ್ವತಿ ಪರಮೇಶ್ವರ ದೇವಾಲಯ ಸುತ್ತಮುತ್ತ ಪ್ರದೇಶದಲ್ಲಿ ಈ ಗಿಡಗಳಿವೆ. ನೂರಾರು ವರ್ಷಗಳ ಇತಿಹಾಸವಿರುವ ಈ ದೇವರ ಗುಡಿ ಸುತ್ತ ಈಶ್ವರನಿಗೆ ಇಷ್ಟಾರ್ಥವಾದ ಬಿಲ್ವ ಪತ್ರೆ ಗಿಡಗಳಿವೆ. ಹಾಗಂತ ಯಾರೋ ಆಸಕ್ತಿಯಿಂದ ಈ ಗಿಡಗಳನ್ನು ನೆಟ್ಟು ಬೆಳೆಸಿಲ್ಲ. ಪ್ರಕೃತಿಗನುಗುಣವಾಗಿ ಬೆಳೆದು ನಿಂತಿವೆ.
ಹಲವು ಔಷಧಿ ಗುಣಗಳನ್ನು ಹೊಂದಿರುವ ಬಿಲ್ವ ಪತ್ರೆ ಪೂಜಾ ಕಾರ್ಯದಲ್ಲಿ ಮಾತ್ರವಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಅರಣ್ಯವಾಸಿ ಜಿಂಕೆ, ನವಿಲು, ಕರಡಿ ಸೇರಿದಂತೆ ಹಲವು ವನ್ಯಜೀವಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಪ್ರಾಣಿಗಳಿಗೂ ಈ ಸಸ್ಯ ಅತಿ ಪ್ರಿಯವಾದದ್ದು ಎನ್ನಲಾಗುತ್ತದೆ.ದೇವರ ಕಾಡು:
ಪ್ರಾಕೃತಿಕವಾಗಿ ಈ ಸಸ್ಯ ಬೆಳೆದು ನಿಂತಿರುವುದನ್ನು ಗಮನಿಸಿದವರಿಗೆ ಅಚ್ಚರಿ ಕಾಡದೇ ಇರದು. ಈ ಭಾಗದ ಜನ ಈ ಸ್ಥಳವನ್ನು ಅತಿ ಪೂಜನೀಯವಾಗಿ ಕಾಣುತ್ತಾರೆ. ಇದನ್ನು ದೇವರ ಕಾಡು ಎಂದೇ ಭಾವಿಸುತ್ತಾರೆ. ಇಲ್ಲಿ ಅಪಾರವಾದ ದೇವರ ಶಕ್ತಿ ಇದೆ ಎಂಬ ನಂಬಿಕೆ ಜನರದ್ದು. ಹಿಂದಿನ ದಿನಗಳಲ್ಲಿ ದೇವತೆಗಳು, ಋಷಿಮುನಿಗಳು ಇಲ್ಲಿ ತಂಗಿ ತಪಸ್ಸು ಮಾಡಿರಬಹುದು. ಇದರ ಫಲವೇ ಇಂದು ಬಿಲ್ವ ಪತ್ರೆ ಬೆಳೆದು ನಿಂತಿರಬಹುದು ಎಂಬ ಅಭಿಪ್ರಾಯ ಹಿರಿಯರಿಂದ ಕೇಳಿ ಬರುತ್ತಿದೆ.ಈ ವಿಷಯದ ಬಗ್ಗೆ ಸಾಕಷ್ಟು ಜನರಿಗೆ ಅರಿವು ಕೂಡ ಇಲ್ಲ. ಬಹುತೇಕರು ದೇವಾಲಯ ಪಕ್ಕದಲ್ಲಿ ಏನೋ ಪತ್ರೆ ಗಿಡಗಳಿವೆ ಅಂದುಕೊಂಡಿರಬಹುದು. ಆದರೆ ಒಂದು ಬಾರಿ ದೇವಾಲಯ ಸುತ್ತ ಇರುವ ಅರಣ್ಯದ ಒಳ ಹೊಕ್ಕು ನೋಡಿದರೆ ಎಲ್ಲೆಂದರಲ್ಲಿ ಬಿಲ್ವ ಪತ್ರೆ ಗಿಡಗಳೇ ಕಾಣಸಿಗುತ್ತವೆ. ಅರಣ್ಯ ಇಲಾಖೆಯ ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು 3000ಕ್ಕೂ ಅಧಿಕ ಪತ್ರೆ ಗಿಡಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೆಲ ವರ್ಷಗಳ ಹಿಂದೆ ಈ ಬಗ್ಗೆ ಅಧ್ಯಯನ ನಡೆಸಿರುವ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಮತ್ತಷ್ಟು ಬಿಲ್ವ ಪತ್ರೆ ಗಿಡಗಳನ್ನು ಬೆಳೆಸಿ ಬಿಲ್ವ ಪತ್ರೆಯ “ಪವಿತ್ರ” ವನ ನಿರ್ಮಾಣ ಮಾಡಲು ಮುಂದಾಗಿತ್ತು. ಈ ಕೆಲಸ ಮಾಡುವುದರಿಂದ ಜನರಲ್ಲಿ ಪೂಜನೀಯ ಭಾವನೆ ಹೆಚ್ಚಲಿದ್ದು, ಕಾಡುಗಳ್ಳರಿಂದ ಅರಣ್ಯ ಸಂಪತ್ತು ರಕ್ಷಿಸಲು ಸಾಧ್ಯ ಎಂಬ ಅಭಿಪ್ರಾಯ ಇಲಾಖೆಯದ್ದು. ಅದೇನಾಯಿತೋ ಗೊತ್ತಿಲ್ಲ. ಕಾಲಾನುಕ್ರಮ ಅರಣ್ಯ ಇಲಾಖೆ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈ ಯೋಜನೆ ನಿಂತು ಹೋಯಿತು. ಈಗಲಾದರೂ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತರ ಆಗ್ರಹ.ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಪತ್ರೆ ವನದ ಜೊತೆಗೆ ನಗರ ವನ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣ ನಗರವನ ಉದ್ಯಾನ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎನ್ನುತ್ತಾರೆ ವಲಯ ಅರಣ್ಯಾಧಿಕಾರ ಮುಂಡಗೋಡ ವಾಗೀಶ ಬಾಚಿನಕೊಪ್ಪ.