ಗ್ರಾಮಸ್ಥರ ಒಗ್ಗಟ್ಟಿನ ಹೋರಾಟಕ್ಕೆ ಬಯೋಗ್ಯಾಸ್‌ ಪ್ಲಾಂಟ್‌ ಸ್ಥಳಾಂತರ

KannadaprabhaNewsNetwork |  
Published : Aug 30, 2026, 01:45 AM IST
ತಮ್ಮೂರಲ್ಲಿ ಸ್ಥಾಪನೆಯಾಗುತ್ತಿದ್ದ ಬಯೋಗ್ಯಾಸ್‌ ಪ್ಲಾಂಟ್‌ ಸ್ಥಳಾಂತರಕ್ಕೆ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರಸ್ಪರ ಸಿಹಿ ಹಂಚಿದರು. | Kannada Prabha

ಸಾರಾಂಶ

ಹೋರಾಟಕ್ಕೆ ಖಂಡಿತ ಫಲ ಸಿಗಲಿದೆ, ಒಗ್ಗಟ್ಟಾಗಿ ನಿಂತರೆ ಎಂತಹ ದೊಡ್ಡ ನಿರ್ಧಾರವನ್ನು ಸಹ ಬದಲಿಸಬಹುದು ಎಂಬುದನ್ನು ತಾಲೂಕಿನ ಶಿವಳ್ಳಿ ಸೇರಿದಂತೆ ಸುತ್ತಲಿನ ಐದು ಗ್ರಾಮಗಳ ಜನತೆ ಸಾಬೀತುಪಡಿಸಿದ್ದಾರೆ.

ಧಾರವಾಡ:

ಹೋರಾಟಕ್ಕೆ ಖಂಡಿತ ಫಲ ಸಿಗಲಿದೆ, ಒಗ್ಗಟ್ಟಾಗಿ ನಿಂತರೆ ಎಂತಹ ದೊಡ್ಡ ನಿರ್ಧಾರವನ್ನು ಸಹ ಬದಲಿಸಬಹುದು ಎಂಬುದನ್ನು ತಾಲೂಕಿನ ಶಿವಳ್ಳಿ ಸೇರಿದಂತೆ ಸುತ್ತಲಿನ ಐದು ಗ್ರಾಮಗಳ ಜನತೆ ಸಾಬೀತುಪಡಿಸಿದ್ದಾರೆ.

ಶಿವಳ್ಳಿ ಗ್ರಾಮದ ಸಮೀಪದ ಮಡ್ಡಿಗುಡ್ಡದಲ್ಲಿ 450 ಟನ್ ಸಾಮರ್ಥ್ಯದ ಬಯೋಗ್ಯಾಸ್ ಪ್ಲಾಂಟ್ ಸ್ಥಾಪನೆಗೆ ಮುಂದಾಗಿದ್ದ ಹು-ಧಾ ಮಹಾನಗರ ಪಾಲಿಕೆಯ ಕ್ರಮದ ವಿರುದ್ಧ ಗ್ರಾಮಸ್ಥರು ಒಂದು ತಿಂಗಳಿಂದ ನಡೆಸಿದ ತೀವ್ರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಇದೀಗ ಪ್ಲಾಂಟ್ ಸ್ಥಳಾಂತರಕ್ಕೆ ಮಹಾನಗರ ಪಾಲಿಕೆ ಒಪ್ಪಿಗೆ ಸೂಚಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರದ ಹಸಿ ಕಸವನ್ನು ಮಡ್ಡಿಗುಡ್ಡಕ್ಕೆ ತಂದು ಬೃಹತ್ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಲು ಮಹಾನಗರ ಪಾಲಿಕೆಯು ಕಾರ್ಯಾರಂಭ ಮಾಡಿತ್ತು. ಆದರೆ, ಇದು ನಮ್ಮ ಪರಿಸರ, ಗಾಳಿ, ನೀರು, ಭೂಮಿ ಹಾಗೂ ಮುಂದಿನ ಪೀಳಿಗೆಯ ಬದುಕಿಗೆ ಮಾರಕವಾಗಬಹುದು ಎಂದರಿತ ಶಿವಳ್ಳಿ, ಹೆಬ್ಬಳ್ಳಿ, ಸುಳ್ಳ, ಮಾರಡಗಿ ಹಾಗೂ ಸೋಮಾಪುರ ಗ್ರಾಮಗಳ ಜನರು ಪಕ್ಷ-ಜಾತಿ ಭೇದ ಮರೆತು ಒಂದೇ ಧ್ವನಿಯಲ್ಲಿ ಎದ್ದು ನಿಂತರು.

ನಮ್ಮ ನೆಲವನ್ನು ಕಸದ ತಾಣವಾಗಲು ಬಿಡುವುದಿಲ್ಲ... ನಮ್ಮ ಮಕ್ಕಳ ಭವಿಷ್ಯದ ಜೊತೆ ಯಾರೂ ಆಟವಾಡಲು ಬಿಡುವುದಿಲ್ಲ...”ಎಂಬ ಘೋಷಣೆಯೊಂದಿಗೆ ಗ್ರಾಮಸ್ಥರು ಧಾರವಾಡ ವರೆಗೆ ಪಾದಯಾತ್ರೆ ನಡೆಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೂ ತರುವ ಮೂಲಕ ಅಧಿಕಾರಿಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದರು.

ಅಷ್ಟಕ್ಕೇ ಹೋರಾಟ ನಿಲ್ಲಲಿಲ್ಲ. ಮಡ್ಡಿಗುಡ್ಡದಲ್ಲೇ ವನಮಹೋತ್ಸವ ನಡೆಸುವ ಮೂಲಕ, “ಇದು ಕಸದ ನೆಲವಲ್ಲ... ಇದು ಹಸಿರಿನ ನೆಲ” ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ರವಾನಿಸಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು. ಯುವಕರು, ರೈತರು, ಮಹಿಳೆಯರು, ಹಿರಿಯರು ಸೇರಿದಂತೆ ಪ್ರತಿಯೊಬ್ಬ ಗ್ರಾಮಸ್ಥರೂ ಹೋರಾಟದ ಭಾಗವಾಗಿದ್ದರು. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು, ಊರಿನ ಮತ್ತು ಪರಿಸರದ ರಕ್ಷಣೆಗಾಗಿ ಎಲ್ಲರೂ ಒಂದಾದಾಗ ಹೋರಾಟಕ್ಕೆ ಶಕ್ತಿ ಬಂದಿತ್ತು.

ಇದೀಗ ಗ್ರಾಮಸ್ಥರ ನಿರಂತರ ಹೋರಾಟಕ್ಕೆ ಮಣಿದ ಆಡಳಿತವು ಬಯೋಗ್ಯಾಸ್ ಪ್ಲಾಂಟ್ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದೆ. ಮೇಯರ್ ದುರ್ಗಮ್ಮ ಬಿಜವಾಡ ಅವರು ಶನಿವಾರ ಪ್ಲಾಂಟ್ ಸ್ಥಳಾಂತರಕ್ಕೆ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಈ ಜಯದ ಸಂತಸದಲ್ಲಿ ಶಿವಳ್ಳಿ ಗ್ರಾಮಸ್ಥರು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ಹಣ ವಾಪಾಸ್‌ವರೆಗೂ ಹೋರಾಟ: ಬಿವೈವಿ
ಮುಂದಿನ ವಾರದಲ್ಲಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ: ಡಾ। ಪರಂ