ಪರಿಸರ ಸಮತೋಲನಕ್ಕೆ ಪಕ್ಷಿಗಳು ಮೂಲಾಧಾರ: ಪ್ರಕಾಶ ಗೌಡರ

KannadaprabhaNewsNetwork |  
Published : Mar 24, 2026, 01:45 AM IST
ಮಂಗೋಲಿಯಾ ಟು ಮಾಗಡಿ ಪುಸ್ತಕವನ್ನು ನಂದಿವೇರಿಮಠದ ಶಿವಕುಮಾರ ಶ್ರೀಗಳು ಬಿಡುಗಡೆ ಮಾಡಿದರು. ವಿವೇಕಾನಂದಗೌಡ ಪಾಟೀಲ, ಆರ್.ಎಸ್. ಬುರಡಿ ಇದ್ದರು. | Kannada Prabha

ಸಾರಾಂಶ

ಆಹಾರ, ನೀರು, ವಿಶ್ರಾಂತಿ ಇಲ್ಲದೇ ಸಾವಿರಾರು ಕಿಲೋಮಿಟರ್ ವಲಸೆ ಬರುವ ಪಕ್ಷಿಗಳು ಅತಿಯಾದ ಕ್ರಿಮಿಕೀಟಗಳ ಹಾವಳಿಯಿಂದ ಮನುಷ್ಯನನ್ನು ರಕ್ಷಿಸುತ್ತವೆ. ಪರಿಸರದಲ್ಲಿರುವ ಜೇನ್ನೊಣಗಳು ಮಾಡುವ ಪರಾಗಸ್ಪರ್ಶ ಕ್ರಿಯೆಯಿಂದ ಮನುಷ್ಯನಿಗೆ ಆಹಾರ ದೊರೆಯುತ್ತಿದೆ.

ಗದಗ: ಪಕ್ಷಿಗಳ ಜೀವನ ಕ್ರಮ ಚೇತೋಹಾರಿಯಾಗಿದೆ. ಚಲನೆ, ವೀಕ್ಷಣೆ, ವೈರಿಗಳಿಂದ ರಕ್ಷಣೆ ಮುಂತಾದ ವಿಷಯಗಳಲ್ಲಿ ಅವುಗಳ ಯೋಚನಾ ಶಕ್ತಿ ಅದ್ಭುತ. ಪರಿಸರ ಸಮತೋಲನದ ಹಿನ್ನೆಲೆ ಪಕ್ಷಿಗಳ ಪಾತ್ರ ಮಹತ್ವದ್ದು. ಮನುಷ್ಯ ಇವುಗಳನ್ನು ತನ್ನ ಪರಿವಾರದ ಭಾಗವಾಗಿ ನೋಡಬೇಕು ಎಂದು ಪಕ್ಷಿಮಿತ್ರ ಪ್ರಕಾಶ ಗೌಡರ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಕೆ.ಎಸ್. ಕೊಡ್ಲಿವಾಡ ಅವರು ರಚಿಸಿದ ಮಂಗೋಲಿಯಾ ಟು ಮಾಗಡಿ ವಲಸೆ ಪಕ್ಷಿಗಳ ಪುಸ್ತಕದ ಕುರಿತು ಮಾತನಾಡಿದರು.

ಆಹಾರ, ನೀರು, ವಿಶ್ರಾಂತಿ ಇಲ್ಲದೇ ಸಾವಿರಾರು ಕಿಲೋಮಿಟರ್ ವಲಸೆ ಬರುವ ಪಕ್ಷಿಗಳು ಅತಿಯಾದ ಕ್ರಿಮಿಕೀಟಗಳ ಹಾವಳಿಯಿಂದ ಮನುಷ್ಯನನ್ನು ರಕ್ಷಿಸುತ್ತವೆ. ಪರಿಸರದಲ್ಲಿರುವ ಜೇನ್ನೊಣಗಳು ಮಾಡುವ ಪರಾಗಸ್ಪರ್ಶ ಕ್ರಿಯೆಯಿಂದ ಮನುಷ್ಯನಿಗೆ ಆಹಾರ ದೊರೆಯುತ್ತಿದೆ.

ಪಕ್ಷಿಗಳ ಮಲಮೂತ್ರದಿಂದ ಅರಣ್ಯ ಸೃಷ್ಟಿಯಾಗಿದೆ. ಈ ಹಿನ್ನೆಲೆ ಮನುಷ್ಯ ಶ್ರೇಷ್ಠತೆಯ ವ್ಯಸನದಿಂದ ಹೊರಬಂದು ಪರಿಸರದ ಕೂಸಾಗಿ ಬದುಕಬೇಕು ಎಂದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಂದಿವೇರಿಮಠದ ಶಿವಕುಮಾರ‌ ಶ್ರೀಗಳು, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕು. ನಮ್ಮ ಬದುಕಿಗೆ ಬೇಕಾದ ಎಲ್ಲ ಮೂಲ ಅಂಶಗಳು ಪರಿಸರದಿಂದ ದೊರೆಯುತ್ತವೆ ಎಂಬುದನ್ನು ಮರೆಯುತ್ತಿದ್ದೇವೆ. ಮಾಗಡಿ ಮತ್ತು ಶೆಟ್ಟಿಕೆರೆ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ವಿದ್ಯಾರ್ಥಿಗಳಿಗೆ, ಪಕ್ಷಿಪ್ರಿಯರಿಗೆ ಈ ಪುಸ್ತಕ ಸಂಪನ್ಮೂಲ ಸಾಮಗ್ರಿಯಾಗಿದೆ ಎಂದರು.

ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿ, ಪರಿಸರದಲ್ಲಿರುವ ಎಲ್ಲ ಅಂಶಗಳನ್ನು ಪ್ರೀತಿಸುವುದರ ಜತೆಗೆ ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರ ಶಿಕ್ಷಣವನ್ನು ಪ್ರಾಯೋಗಿಕಗೊಳಿಸಬೇಕು. ಜಿಲ್ಲೆಯ ಹೆಮ್ಮೆಯ ತಾಣಗಳ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಲೇಖಕ ಕೆ.ಎಸ್. ಕೊಡ್ಲಿವಾಡ ಮಾತನಾಡಿ, ವಲಸೆ ಪಕ್ಷಿಗಳ ಬಗ್ಗೆ ಕುತೂಹಲವೆನಿಸಿ ಅಧ್ಯಯನ ಮಾಡಿ ಈ ಪುಸ್ತಕವನ್ನು ರಚಿಸಲಾಗಿದೆ. ಮಾಗಡಿ ಕೆರೆಯ ಸ್ವಚ್ಛತೆ, ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ವಿಪುಲ ಅವಕಾಶಗಳಿದ್ದು, ಈ ದಿಸೆಯಲ್ಲಿ ಸಚಿವರು ಕಾರ್ಯಪ್ರವೃತ್ತರಾಗಿರುವುದು ಆಶಾದಾಯಕವಾಗಿದೆ. ಬೇಸಿಗೆಯ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು. ಪರಿಸರ ಸಂಬಂಧಿ ಚರ್ಚೆ, ಸಂವಾದ, ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ರಾಹುಲ ಗಿಡ್ನಂದಿ ನಿರೂಪಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಅಶೋಕ ಹಾದಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಂದಾನಪ್ಪ ವಿಭೂತಿ, ಸುನೀತಾ ಬುರುಡಿ, ಡಿ.ಎಚ್. ಪಾಟೀಲ ಉಪಸ್ಥಿತರಿದ್ದರು. ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಜಿ.ಬಿ. ಪಾಟೀಲ, ರಾಜಶೇಖರ ಬಳ್ಳಾರಿ, ಅಮರೇಶ ರಾಂಪೂರ, ರತ್ನಕ್ಕ ಪಾಟೀಲ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಸಿಂಗಟಾಲೂರು ವೀರಭದ್ರೇಶ್ವರ ರಥೋತ್ಸವ
ಕಾಡಾನೆ ಹಾವಳಿ ತಡೆಗೆ ಹೆಚ್ಚುವರಿ ಕಂದಕ ನಿರ್ಮಾಣಕ್ಕೆ ಕ್ರಮ:ಖಂಡ್ರೆ