ಕನ್ನಡಪ್ರಭ ವಾರ್ತೆ ಹಾನಗಲ್ಲ
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ೨೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಮುಂಚೂಣಿಯಲ್ಲಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಬಳಿ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಪರಸ್ಪರ ನಂಬಿಕೆ, ಸಹಕಾರ, ವಿಶ್ವಾಸಗಳಿಂದ ಮಾತ್ರ ಸಹಕಾರಿ ಸಂಘ-ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಯಾವುದೇ ಬ್ಯಾಂಕು ಗಟ್ಟಿಯಾಗಿ ನಿಲ್ಲಬೇಕಾದರೆ ಸಾಲ ಮರುಪಾವತಿ ನೂರಕ್ಕೆ ನೂರರಷ್ಟು ಇರಬೇಕು. ಅಂದಾಗ ಮಾತ್ರ ಭದ್ರವಾಗಿ ನೆಲೆ ನಿಲ್ಲಲು ಸಾಧ್ಯವಿದೆ. ಗ್ರಾಹಕರು ಪಡೆದ ಸಾಲವನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಕೆ ಮಾಡಿ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ರೂಢಿ ಬೆಳೆಸಿಕೊಳ್ಳಬೇಕಿದೆ. ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿನ ಉತ್ಸಾಹ ಮರುಪಾವತಿ ಮಾಡುವಾಗಲೂ ಇರಬೇಕಿದೆ ಎಂದ ಅವರು, ಬೀರೇಶ್ವರ ಸಂಸ್ಥೆ ಗ್ರಾಹಕರ ನಂಬಿಕೆ ಉಳಿಸಿಕೊಂಡಿದೆ. ಹತ್ತಾರು ಸಾರ್ವಜನಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಹಿರಿಯ ಶಾಖಾ ವ್ಯವಸ್ಥಾಪಕ ಅಶೋಕ ಬಾಕಳೆ ಮಾತನಾಡಿ, ೧೯೯೧ರಲ್ಲಿ ಆರಂಭಗೊಂಡ ಸಂಸ್ಥೆ ಮೂರು ರಾಜ್ಯಗಳಲ್ಲಿ ಒಟ್ಟು ೨೦೬ ಶಾಖೆಗಳನ್ನು ಹೊಂದಿದ್ದು, ಸಹಕಾರ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಿದೆ. ನಗರ ಪ್ರದೇಶಗಳಲ್ಲಿ ಲಭ್ಯ ಸೇವೆಗಳನ್ನು ಗ್ರಾಮೀಣ ಪ್ರದೇಶದ ಗ್ರಾಹಕರಿಗೂ ನೀಡುತ್ತಿದೆ ಎಂದು ತಿಳಿಸಿದರು.ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ಕಲ್ಯಾಣಕುಮಾರ ಶೆಟ್ಟರ, ಸದಸ್ಯರಾದ ವಿರುಪಾಕ್ಷಪ್ಪ ಕಡಬಗೇರಿ, ವೀಣಾ ಗುಡಿ, ಪ್ರಮುಖರಾದ ಗುಂಡಣ್ಣ ಭಟ್, ರಾಜೂ ಗುಡಿ, ಭೋಜರಾಜ ಕರೂದಿ, ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಪ್ರಭು ಲಕ್ಕಶೆಟ್ಟಿ, ಮಹಾಂತೇಶ ಪಟ್ಟಣ, ಭೋಜಪ್ಪ ಬಿಜ್ಜಣ್ಣನವರ, ನಂದೀಶ ಮೊದಲಾದವರು ಈ ಸಂದರ್ಭದಲ್ಲಿದ್ದರು.