ರಾಜ್ಯದಲ್ಲಿ ಆರ್ಥಿಕ ಅಶಿಸ್ತು ತಾಂಡವವೇ ಸಿದ್ದು ಸರ್ಕಾರದ ಸಾಧನೆ: ಬ್ರಿಜೇಶ್‌ ಚೌಟ ಲೇವಡಿ

KannadaprabhaNewsNetwork |  
Published : May 22, 2026, 03:00 AM IST
ಸಂಸದ ಕ್ಯಾ.ಬ್ರಿಜೇಶ್‌ ಚೌಟ  | Kannada Prabha

ಸಾರಾಂಶ

ದೇಶದ ಹಾಟ್‌ಸ್ಪಾಟ್‌ ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕವನ್ನು ಆರ್ಥಿಕ ಅಶಿಸ್ತಿಗೆ ತಂದು ನಿಲ್ಲಿಸಿದ್ದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಮೂರು ವರ್ಷಗಳ ಸಾಧನೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಲೇವಡಿ ಮಾಡಿದ್ದಾರೆ.

ಮಂಗಳೂರು: ದೇಶದ ಹಾಟ್‌ಸ್ಪಾಟ್‌ ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕವನ್ನು ಆರ್ಥಿಕ ಅಶಿಸ್ತಿಗೆ ತಂದು ನಿಲ್ಲಿಸಿದ್ದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಮೂರು ವರ್ಷಗಳ ಸಾಧನೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಲೇವಡಿ ಮಾಡಿದ್ದಾರೆ. ಮಂಗಳೂರಿನ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬೊಮ್ಮಾಯಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಆರ್ಥಿಕ ಶಿಸ್ತಿಗೆ ಹೆಸರುವಾಸಿಯಾಗಿತ್ತು. ಅಂತಹ ರಾಜ್ಯ ಇಂದು ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವುದನ್ನು ಸಿಎಜಿ ವರದಿಯೇ ಹೇಳುತ್ತಿದೆ. ಇದಕ್ಕೆ ಸಾಧನಾ ಸಮಾವೇಶ ನಡೆಸುತ್ತಿರುವ ರಾಜ್ಯ ಸರ್ಕಾರ ಉತ್ತರಿಸಬೇಕಿದೆ ಎಂದರು.

ಕೇಂದ್ರ ಯೋಜನೆ ಜಾರಿಗೆ ಅಸಡ್ಡೆ:

ರಾಜ್ಯದಲ್ಲಿ ಆರ್ಥಿಕ ಶಿಸ್ತು ಕಾಪಾಡಲು ಸಾಧ್ಯವಾಗದೆ ಪ್ರಜೆಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿರುವುದೇ ಸರ್ಕಾರದ ಸಾಧನೆಯಾಗಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಜಾರಿಯಲ್ಲಿಯೂ ಅಸಡ್ಡೆ ವಹಿಸಲಾಗಿದೆ. ಪಿಎಂ ಆವಾಸ್‌ ಯೋಜನೆಯಡಿ 6.38 ಲಕ್ಷ ಮನೆಗಳು ಮಂಜೂರಾಗಿದ್ದು, 2.5 ಲಕ್ಷ ಮನೆಗಳು ಅಪೂರ್ಣವಾಗಿವೆ. ಕ್ಷೀರಧಾರೆ ಯೋಜನೆಯಡಿ ಕಳೆದ 9 ತಿಂಗಳಿನಿಂದ 800 ಕೋಟಿ ರು. ಸಬ್ಸಿಡಿ ಹಣವನ್ನು ಹೈನುಗಾರರಿಗೆ ಬಾಕಿ ಇರಿಸಲಾಗಿದೆ. 15,000 ಕೋಟಿ ರು. ಕಾರ್ಪಸ್‌ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಯಾವ ಉದ್ದೇಶವೆಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ ಎಂದು ಕ್ಯಾ. ಬ್ರಿಜೇಶ್‌ ಚೌಟ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ ಎಂದು ಹೇಳಿದ ಕ್ಯಾ.ಚೌಟ, ವೆನ್ಲಾಕ್‌, ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆ ಹಾಗೂ ಕೊಕ್ಕಡ ಎಂಡೋ ಪಾಲನಾ ಕೇಂದ್ರಗಳನ್ನು ಸಿಎಸ್‌ಆರ್‌ನ 25 ಕೋಟಿ ರು. ನಿಧಿಗಳಲ್ಲಿ ನಡೆಸುವಂತಾಗಿದೆ. ಇಲ್ಲಿಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಹೊಸ ನೇಮಕಾತಿ ಮಾಡುತ್ತಿಲ್ಲ. ಒಟ್ಟಿನಲ್ಲಿ ರಾಜ್ಯವನ್ನು ಕಾಂಗ್ರೆಸ್‌ ಎಟಿಎಂ ರೀತಿ ಬಳಸಿಕೊಂಡು ಇಲ್ಲಿನ ಜನರನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಕಾಲನಿ ನಿಧಿಯನ್ನು ಹೊಸದಾಗಿ ಸೃಜಿಸುವ ಮೂಲಕ ಹಿಂದು-ಮುಸ್ಲಿಂ ನಡುವೆ ತಾರತಮ್ಯದ ನಡೆಯನ್ನು ಸರ್ಕಾರ ಸೃಷ್ಟಿಸಿದೆ. ಈ ಮೂಲಕ ಅಂಬೇಡ್ಕರ್‌ರ ಸಮಾನತೆಯ ತತ್ವಗಳಿಗೆ ತಿಲಾಂಜಲಿ ನೀಡುವ ಪ್ರಕ್ರಿಯೆಯನ್ನು ಸರ್ಕಾರವೇ ನಡೆಸುತ್ತಿದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟು ಬಿಜೆಪಿ ಜನಾಭಿಪ್ರಾಯವನ್ನು ಸೃಷ್ಟಿಸಲಿದೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಜನರ ಒಲವು ಗಳಿಸುವ ಮೂಲಕ ಬಿಜೆಪಿ ಅಧಿಕಾರ ಪಡೆದು ಕೇಂದ್ರ ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದರು.

ಇಂಧನ ದರ ಏರಿಕೆ ಜಾಗತಿಕ ಸಮಸ್ಯೆ:

ದೇಶದಲ್ಲಿ ಪೆಟ್ರೋಲ್‌- ಡೀಸೆಲ್‌ ಬೆಲೆ ಏರಿಕೆಯಿಂದ ಜನರ ಮೇಲಾಗುತ್ತಿರುವ ಪರಿಣಾಮದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕ್ಯಾ. ಬ್ರಿಜೇಶ್‌ ಚೌಟ, ಇದು ಏಕಾಏಕಿಯಾಗಿ ಏರಿಸಿದ್ದಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಜಾಗತಿಕವಾಗಿ ತಲೆದೋರಿರುವ ಸಮಸ್ಯೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸದ್ಯ ಸವಾಲಿನದ್ದಾಗಿದ್ದರೂ ಅದನ್ನು ಸರಿದೂಗಿಸುವ ಕೆಲಸ ನಡೆಯುತ್ತಿದೆ ಎಂದರು.ಯೋಜನೆಗಳ ವಿರೋಧಿಯಲ್ಲ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಗ್ಯಾರಂಟಿ ಯೋಜನೆಗಳ ಕುರಿತ ಪ್ರಶ್ನೆಗೆ, ಯಾವುದೇ ಯೋಜನೆಗಳ ವಿರೋಧಿ ನಾವಲ್ಲ. ಆದರೆ ರಾಜ್ಯದಲ್ಲಿ ತಪ್ಪು ಆರ್ಥಿಕ ನಿರ್ವಹಣೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದರು.

ಮುಖಂಡರಾದ ಶಾಂತಿ ಪ್ರಸಾದ್‌, ಸುಜಿತ್‌ ಪ್ರತಾಪ್‌, ಡಾ. ಮಂಜುಳಾ ರಾವ್‌, ಸಂಜಯ್‌ ಪ್ರಭು, ಅರುಣ್‌ ಶೇಟ್‌, ರಾಜ್‌ಗೋಪಾಲ್‌ ರೈ, ಜೀವನ್‌, ಡೊಂಬಯ್ಯ, ಹೇಮತ್‌ ಶಟ್‌, ಕದ್ರಿ ಮನೋಹರ್‌ ಶೆಟ್ಟಿ, ಮಾಧವ ಮಾವೆ ಇದ್ದರು.

ಪ್ರತಿಯೊಂದಕ್ಕೂ ಟ್ವೀಟ್‌ ಮಾಡಿಕೊಂಡು ನಾನು ರಾಜಕೀಯ ಮಾತನಾಡುವುದಿಲ್ಲ. ಪ್ರಿಯಾಂಕ್‌ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಾಧನೆ ಅವರ ಕ್ಷೇತ್ರಗಳಲ್ಲಿನ ಅಭಿವೃದ್ಧಿಯಿಂದಲೇ ತಿಳಿಯುತ್ತದೆ.

-ಕ್ಯಾ.ಬ್ರಿಜೇಶ್‌ ಚೌಟ, ಸಂಸದರು, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತ
ಈರಣ್ಣ ಮೆಳ್ಳಿಗೇರಿ ತಂಡಕ್ಕೆ ಪ್ರಿಮಿಯರ್ ಲೀಗ್, ನಗದು ₹೨ ಲಕ್ಷ ಬಹುಮಾನ