ಅಪ್ರತಿಮ ದೇಶಪ್ರೇಮಿ ಆಗಿದ್ದ ಬಿರ್ಸಾಮುಂಡಾ: ಪುಟ್ಟರಂಗಶೆಟ್ಟಿ

KannadaprabhaNewsNetwork | Published : Nov 16, 2024 12:34 AM

ಸಾರಾಂಶ

ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಸಮಾರಂಭವನ್ನು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆದಿವಾಸಿಗಳ ಹಕ್ಕು, ಮೂಲಸಂಸ್ಕೃತಿ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಬಿರ್ಸಾಮುಂಡಾ ಅವರು ದೇಶದ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಾಗಿದ್ದರು ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾರತ ಸರ್ಕಾರದ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸ್ ಅಂಗವಾಗಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಮಹೋತ್ಸವ ಹಾಗೂ ಪಿಎಂ ಜನ್‌ಮನ್ ಕಾರ್ಯಕ್ರಮದ ಫಲಾನುಭವಿಗಳಿಗೆ ದಾಖಲಾತಿ, ಸವಲತ್ತು ವಿತರಣೆ, ಎಂಪಿಸಿ ಶಂಕುಸ್ಥಾಪನೆ ಮತ್ತು ದರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಪ್ರತಿಮ ದೇಶಪ್ರೇಮಿಯಾಗಿದ್ದ ಆದಿವಾಸಿಗಳ ಮಹಾನ್ ನಾಯಕ ಬಿರ್ಸಾಮುಂಡಾ ಅವರನ್ನು ಅತ್ಯಂತ ಕಿರಿಯ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ ಎಂದರೇ ತಪ್ಪಾಗಲಾರದು. ಬಿರ್ಸಾಮುಂಡಾ ಅವರು ಸ್ವಾತಂತ್ರ್ಯ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟು ಒದಗಿಸಿಕೊಟ್ಟರು. ಆದಿವಾಸಿ ಸಂಸ್ಕೃತಿ ರಕ್ಷಣೆಗೆ ಬಿರ್ಸಾಮುಂಡಾ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ದೇಶಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಆದಿವಾಸಿ ಜನರು ಚಿಕ್ಕವಯಸ್ಸಿನಲ್ಲಿಯೇ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿ. ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಾಮಾಜಿಕ, ಶೈಕ್ಷಣಿಕ, ಅರ್ಥಿಕ, ರಾಜಕೀಯವಾಗಿ ಆದಿವಾಸಿಗಳು ಮುಂಚೂಣಿಗೆ ಬರಬೇಕು. ಆದಿವಾಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರವು ಆಶ್ರಮ ಶಾಲೆಗಳನ್ನು ಸ್ಥಾಪಿಸಿದೆ. ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಬಿರ್ಸಾಮುಂಡಾ ಅವರು ಆದಿವಾಸಿಗಳಿಗೆ ಹಕ್ಕುಗಳನ್ನು ಹೋರಾಟದ ಮೂಲಕ ಕೊಡಿಸಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆದಿವಾಸಿ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು. ಮಲೆಮಹದೇಶ್ವರ ಬೆಟ್ಟದ ಆಸುಪಾಸಿನ 10 ಹಳ್ಳಿಗಳಿಗೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜಿಗೆ ಟೆಂಡರ್ ಆಗಿದೆ. ಸಿಎಂ ಜಿಲ್ಲೆಗೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದರು.

ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಮಾತನಾಡಿ, ಆದಿವಾಸಿ ಜನರ ಹಕ್ಕುಗಳಿಗಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಬಿರ್ಸಾಮುಂಡಾ ಅವರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಬಿರ್ಸಾಮುಂಡಾ ಅವರಿಗೆ ಗೌರವ ನೀಡುವ ಸಲುವಾಗಿ ಭಾರತ ಸರ್ಕಾರ ಅವರ ಜಯಂತಿಯನ್ನು ರಾಷ್ಟ್ರೀಯ ಜನಜಾತೀಯ ದಿವಸ್ ಆಗಿ ಘೋಷಣೆ ಮಾಡಿದೆ. ಬ್ರಿಟಿಷರ ಕ್ರೂರ ನೀತಿಗಳಿಗೆ ಸೆಡ್ಡುಹೊಡೆದು ಜನರನ್ನು ಸಂಘಟಿಸಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿದ ಧಿಮಂತ ವ್ಯಕ್ತಿತ್ವ ಬಿರ್ಸಾಮುಂಡಾ ಅವರದ್ದು ಎಂದರು.

ಇತ್ತೀಚೆಗೆ ಪ್ರಚಲಿತವಾಗುತ್ತಿರುವ ಬಿರ್ಸಾಮುಂಡಾ ಅವರ ಜೀವನ ಚರಿತೆ ಬಗ್ಗೆ ಇತಿಹಾಸಕಾರರು ಹೆಚ್ಚಿನ ಬೆಳಕು ಚೆಲ್ಲಬೇಕು. ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟೀಷರು ಭಾರತವನ್ನು ವಸಾಹತುವಾಗಿ ಮಾಡಿಕೊಂಡು ಪಾಶ್ವಿಮಾತ್ಯ ಸಂಸ್ಕೃತಿಯನ್ನು ಹೇರುವ ಮೂಲಕ ದೇಶದ ಮೂಲಸಂಸ್ಕೃತಿಗೆ ಕೊಡಲಿಪೆಟ್ಟು ನೀಡಿದ್ದರು. ಇವರ ವಿರುದ್ಧ ಹೋರಾಡಿದ ಬಿರ್ಸಾಮುಂಡಾ ಹೋರಾಟದ ಅರಿವು ಪ್ರತಿಯೊಬ್ಬರಿಗೂ ಮೂಡಬೇಕು. ಆದಿವಾಸಿ ಜನರ ಧೃವತಾರೆಯಾಗಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು. ಭೂ ಸಂಬಂಧಿ ಕಾಯ್ದೆಗಳನ್ನು ಜಾರಿಗೊಳಿಸಿದ ಬ್ರಿಟಿಷರು ಆದಿವಾಸಿಗಳು ಕಾಡಿನಲ್ಲಿ ವಾಸಿಸುವ ಹಕ್ಕುಗಳನ್ನು ಅರಣ್ಯ ಸಂರಕ್ಷಣೆ ನೆಪದಲ್ಲಿ ಕಿತ್ತುಕೊಂಡರು. ರೈಲ್ವೆ ಯೋಜನೆಗೆ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದರು. ಇದೆಲ್ಲವನ್ನು ಮನಗಂಡಿದ್ದ ಬಿರ್ಸಾಮುಂಡಾ ಬ್ರಿಟೀಷರ ವಿರುದ್ಧ ಆರಂಭವಾದ ಸ್ವಾತಂತ್ರ್ಯ ಹೋರಾಟಕ್ಕೆ ಸೈದ್ದಾಂತಿಕ ಹಾಗೂ ತಾತ್ವಿಕ ನೆಲೆ ಕಲ್ಪಿಸಿದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಬಿರ್ಸಾಮುಂಡಾ ಗೆರಿಲ್ಲಾ ಯುದ್ಧತಂತ್ರ ಮೂಲಕ ಹಿಮ್ಮೆಟ್ಟುವಂತೆ ಮಾಡಿದರು. ಇದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿದಾಯಕವಾಗಿತ್ತು ಎಂದು ಡಾ.ಮಹದೇವಸ್ವಾಮಿ ಹೇಳಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಪಿಎಂ ಜನ್‌ಮನ್ ಕಾರ್ಯಕ್ರಮದ ಫಲಾನುಭವಿಗಳಿಗೆ ದಾಖಲಾತಿ, ಸವಲತ್ತು ವಿತರಣೆ ಮಾಡಲಾಯಿತು. ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗುವ ಮಲ್ಟಿಪರ್ಪಸ್ ಕಟ್ಟಡ ಕಾಮಗಾರಿಗೆ ಗಣ್ಯರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನ ಮಂತ್ರಿಗಳು ಬುಡಕಟ್ಟು ಸಮುದಾಯದವರೊಂದಿಗೆ ನಡೆಸುವ ಸಂವಾದ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ), ನಗರಸಭಾ ಉಪಾಧ್ಯಕ್ಷೆ ಮಮತ, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತ, ಎಡಿಸಿ ಗೀತಾ ಹುಡೇದ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ಜಿಪಂ ಯೋಜನಾಧಿಕಾರಿ ಕಿರಣ್ ಪಢ್ನೇಕರ್, ಜಿಲ್ಲಾ ಬುಡಕಟ್ಟು ಸಂಘದ ಅಧ್ಯಕ್ಷ ರಂಗೇಗೌಡ, ಆದಿವಾಸಿ ಮುಖಂಡರಾದ ಕೇತಮ್ಮ, ದಾಸೇಗೌಡ, ಮುದ್ದಯ್ಯ, ಜಡೇಸ್ವಾಮಿ, ಪುಟ್ಟಮ್ಮ, ದೊಡ್ಡಸಿದ್ದಯ್ಯ, ಮುತ್ತಯ್ಯ ಇತರರು ಕಾರ್ಯಕ್ರಮದಲ್ಲಿ ಇದ್ದರು.

Share this article