ಜನನ, ಮರಣ ಪ್ರಮಾಣ ಪತ್ರ ಸಕಾಲದಲ್ಲಿ ಸಿಗಲಿ

KannadaprabhaNewsNetwork |  
Published : Jan 03, 2026, 02:30 AM IST
02ಕೆಪಿಎಲ್‌ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸಾಂಖ್ಯಿಕ ಇಲಾಖೆ ವತಿಯಿಂದ ನಾಗರೀಕ ನೋಂದಣಿ ಪದ್ದತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಶುಕ್ರವಾರ ನಡೆಯಿತು. | Kannada Prabha

ಸಾರಾಂಶ

ಜನನ ಮತ್ತು ಮರಣ ನೋಂದಣಿ ಕಾರ್ಯ ಜಿಲ್ಲೆಯ ಎಲ್ಲ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಸರಿಯಾಗಿ ನಿರ್ವಹಿಸಬೇಕು

ಕೊಪ್ಪಳ: ಬದುಕಿರುವ ಪ್ರತಿಯೊಬ್ಬ ವ್ಯಕ್ತಿಗೆ ಜನನ ಪ್ರಮಾಣ ಪತ್ರ ಅಗತ್ಯವಾದ ದಾಖಲೆಯಾಗಿದೆ ಮತ್ತು ವ್ಯಕ್ತಿಯ ಮರಣದ ನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತ ದಾಖಲೆಯಾಗಿದ್ದು, ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸಾಂಖ್ಯಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನನ ಮರಣ ನೋಂದಣಿ ಅಧಿನಿಯಮಗಳು-1969 ಹಾಗೂ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999 ರನ್ವಯ ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿದೆ. ನಿಗದಿತ ಅವಧಿಯೊಳಗೆ ಯಾವುದೇ ಶುಲ್ಕವಿಲ್ಲದೆ ಜನನ ಮರಣ ನೋಂದಣಿ ಮಾಡಲು ಅವಕಾಶವಿದ್ದು, ಆ ಅವಧಿಯೊಳಗೆ ಜನನ ಮರಣ ಮಾಹಿತಿ ಸಂಬಂಧಿಸಿದ ತಂತ್ರಾಶದಲ್ಲಿ ದಾಖಲಿಸಬೇಕು. ಜನನ-ಮರಣ ನೋಂದಣಿ ಅಧಿನಿಯಮ ಮತ್ತು ನಿಯಮಗಳಂತೆ ಹಾಗೂ 2024ರ ತಿದ್ದುಪಡಿ ನಿಯಮದಂತೆ ಅನುಷ್ಠಾನಕ್ಕೆ ಕ್ರಮವಹಿಸಬೇಕು. ಶೇ.100 ರಷ್ಟು ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ನೋಂದಣಿಯಾಗಿರುವ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು. ವಿಳಂಬ ನೋಂದಣಿ ಘಟನೆ ತಡೆಯುವ ಬಗ್ಗೆಯೂ ಸಹ ಕ್ರಮ ವಹಿಸಬೇಕು. ಶೇ. 100 ರಷ್ಟು ವರದಿ ಸಾಮರ್ಥ್ಯ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನನ ಮತ್ತು ಮರಣ ನೋಂದಣಿ ಕಾರ್ಯ ಜಿಲ್ಲೆಯ ಎಲ್ಲ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಸರಿಯಾಗಿ ನಿರ್ವಹಿಸಬೇಕು. ನೋಂದಣಿ ವೇಳೆ ಸೂಕ್ತ ಪರಿಶೀಲನೆ ಕೈಗೊಂಡು ಅದರ ವರದಿ ಸಲ್ಲಿಸಬೇಕು. ವಿಳಂಬ ನೋಂದಣಿ ಘಟನೆ ತಡೆಬೇಕು. ಯಾವುದೇ ದಾಖಲಾತಿ ಬಾಕಿ ಉಳಿಯದಂತೆ ಶೇ.100 ರಷ್ಟು ನೋಂದಣಿ ಮಾಡುವಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಾಶ ಪಿ.ದೇಶಪಾಂಡೆ ಮಾತನಾಡಿ, ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿರುತ್ತದೆ. 21 ದಿನಗಳೊಳಗಾಗಿ ಯಾವುದೇ ಶುಲ್ಕವಿಲ್ಲದೆ ಜನನ ಮರಣ ನೋಂದಣಿ ಮಾಡಲಾಗುವುದು. 2024ರ ತಿದ್ದುಪಡಿ ನಿಯಮದಂತೆ ಜನನ ಮರಣ ಹೆಚ್ಚುವರಿ ಪ್ರಮಾಣ ಪತ್ರಗಳ ಶುಲ್ಕವೀಗ ₹50 ಆಗಿರುತ್ತದೆ. ವಿಳಂಬ (ತಡ) ನೋಂದಣಿಗೆ ಘಟನೆ ಸಂಭವಿಸಿದ 21 ದಿನಗಳಿಂದ 30 ದಿನದವರೆಗೆ ಶುಲ್ಕ 20 ಆಗಿರುತ್ತದೆ. ಘಟನೆ ಸಂಭವಿಸಿದ 30 ದಿನಗಳ ನಂತರ ಒಂದು ವರ್ಷದವರೆಗೆ ಶುಲ್ಕ ₹50 ಆಗಿರುತ್ತದೆ. ಗಂಗಾವತಿ ತಾಲೂಕಿನಲ್ಲಿ 85 ನೋಂದಣಿ ಘಟಕಗಳು, ಕನಕಗಿರಿ 67, ಕಾರಟಗಿ 36, ಕೊಪ್ಪಳ 180, ಕುಕನೂರು 65, ಕುಷ್ಟಗಿ 197 ಹಾಗೂ ಯಲಬುರ್ಗಾ 101 ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 731 ನೋಂದಣಿ ಘಟಕಗಳಿವೆ. ಇದರಲ್ಲಿ 713 ಗ್ರಾಮಾಂತರ ಮತ್ತು 18 ನಗರ ಪ್ರದೇಶದಲ್ಲಿವೆ ಎಂದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟಪ್ಪನವರ್, ತಾಲೂಕು ಯೋಜನಾಧಿಕಾರಿ ರಾಜಾಸಾಬ ನದಾಫ್, ಜಿಲ್ಲಾ ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ಎಸ್,ಕೆ., ಸಹಾಯಕ ಸಾಂಖ್ಯಿಕ ಅಧಿಕಾರಿ ಕಾಮಾಕ್ಷಿ ಪ್ಯಾಟಿ ಹಾಗೂ ಪ್ರವೀಣ ಅಲಕನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ