ಕಾರವಾರ: ಜಿಲ್ಲೆಯಲ್ಲಿ ಸಂಭವಿಸುವ ಎಲ್ಲ ಜನನ ಮತ್ತು ಮರಣ ಘಟನೆಗಳನ್ನು ನಿಗದಿತ ದಿನಾಂಕದೊಳಗೆ ಶೇ. 100ರಷ್ಟು ನೋಂದಣಿ ಮಾಡುವಂತೆ ಜಿಲ್ಲೆಯ ಎಲ್ಲಾ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ- ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ 2023ರಲ್ಲಿ 18,649 ಜನನ ಮತ್ತು 11,182 ಮರಣ ನೋಂದಣಿ ಕಾರ್ಯ ನಡೆದಿದ್ದು, ಇವುಗಳನ್ನು ಹೊರತುಪಡಿಸಿ ಇತರೇ ಯಾವುದೆ ನೋಂದಣಿಯಾಗದ ಪ್ರಕರಣವಿದ್ದಲ್ಲಿ ಪರಿಶೀಲಿಸಿ, ಎಲ್ಲ ನಗರಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಭವಿಸುವ ಜನನ- ಮರಣಗಳನ್ನು ನಿಗದಿತ ಸಮಯದಲ್ಲಿ ಶೇ. 100ರಷ್ಟು ನೋಂದಣಿ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ- ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಗ್ರಾಮ ಪಂಚಾಯಿತಿಯಲ್ಲಿ ಘಟಿಸುವ ಜನನ- ಮರಣ ಘಟನೆಗಳನ್ನು 21 ದಿನಗಳ ಒಳಗಾಗಿ ನೋಂದಣಿ ಮಾಡಿ, ಉಚಿತವಾಗಿ ಪ್ರಮಾಣಪತ್ರ ವಿತರಿಸಬೇಕು. ಈ ಕುರಿತಂತೆ ಗ್ರಾಪಂಗಳಲ್ಲಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ನಿಗದಿತ ನಾಮಫಲಕ ಅಳವಡಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್‌ಗಳು ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಜನನ- ಮರಣ ನೋಂದಣಿ ಕುರಿತು ನಿಯಮಿತವಾಗಿ ತಪಾಸಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರಮಾಣಪತ್ರಗಳಲ್ಲಿ ತಿದ್ದುಪಡಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ವಿತರಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನನ- ಮರಣ ನೋಂದಣಿ ವಿಷಯದ ಪ್ರಗತಿ ಕುರಿತಂತೆ ಪರಿಶೀಲನೆ ನಡೆಸಬೇಕು ಎಂದರು.
ಸೇವಾ ಸಿಂಧು ತಂತ್ರಾಂಶದಲ್ಲಿ ಜನನ ಮರಣ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಡಿಜಿಟಲ್ ಸಿಗ್ನೇಚರ್ ಬಳಸಿ ಅನುಮೋದನೆ ನೀಡಿರುವ, ಜನನ- ಮರಣ ಪ್ರಮಾಣಪತ್ರಗಳನ್ನು ಸಾರ್ವಜನಿಕರು ಪಡೆಯಬಹುದು ಎಂದರು.ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಸಭೆ ಪೌರಾಯುಕ್ತ ಜಗದೀಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮತ್ತಿತರರು ಇದ್ದರು.