ಸಮಾಜಸೇವಕ ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಹುಟ್ಟುಹಬ್ಬ ಆಚರಣೆ

KannadaprabhaNewsNetwork | Published : Mar 28, 2025 12:31 AM

ಸಾರಾಂಶ

ಮೇಲುಕೋಟೆ ಕ್ಷೇತ್ರದ ನನ್ನ ಹಿತೈಷಿ, ಬೆಂಬಲಿಗರು, ಜನತೆಗೆ ನಾನು ರಾಜಕೀಯ ಜನನಾಯಕನಾಗಬೇಕು ಎಂಬ ಬಯಕೆಯಿದೆ. ಆದರೆ, ಅದಕ್ಕೆ ಸೂಕ್ತವಾದ ಕಾಲ ಬಂದಿಲ್ಲ. ಸಮಯ, ಸಂದರ್ಭ, ಕಾಲಾವಕಾಶ, ಸನ್ನಿವೇಶ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಮಾಜ ಸೇವಕ, ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಬಿ.ರೇವಣ್ಣರ ಹುಟ್ಟುಹಬ್ಬವನ್ನು ಗುರುವಾರ ಕಾರ್ಯಕರ್ತರು, ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದರು.

ನೆಚ್ಚಿನ ನಾಯಕ ಬಿ.ರೇವಣ್ಣರ ಹುಟ್ಟುಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ಅಭಿಮಾನಿಗಳು, ಕಾರ್ಯಕರ್ತರು ಅವರ ನಿವಾಸಕ್ಕೆ ಆಗಮಿಸಿ, ಕೇಕ್ ಕತ್ತರಿಸಿ ಹೂಮಾಲೆ ಹಾಕಿ ಅಭಿನಂದಿಸುವ ಮೂಲಕ ತಮ್ಮ ನಾಯಕರಿಗೆ ಶುಭ ಹಾರೈಸಿದರು.

ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಮಾತನಾಡಿ, ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು, ಸ್ನೇಹಿತರು ಮಧ್ಯರಾತ್ರಿಯಿಂದಲೇ ಅಭಿನಂದಿಸಿ ನನ್ನ ಹುಟ್ಟುಹಬ್ಬವನ್ನು ಆಚರಿಸಿ ಶುಭ ಹಾರೈಸಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ವಿಶ್ವಾಸ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಸದಾ ಹೀಗೆ ಇರಲೆಂದು ಮನವಿ ಮಾಡಿದರು.

ನಾನೊಬ್ಬ ಸಾಮಾನ್ಯ ರೈತ ಕುಟುಂಬದಿಂದ ಬಂದ ಹುಡುಗ. ನನ್ನಂಥ ಯುವಕನನ್ನು ಮೇಲುಕೋಟೆ ಕ್ಷೇತ್ರದ ಜನತೆ ಇಷ್ಟೊಂದು ಪ್ರೀತಿ, ಅಭಿಮಾನ ತೋರಿ ಶುಭ ಹಾರೈಸಿದ್ದಾರೆ. ನನ್ನ ಕೊನೆ ಉಸಿರು ಇರುವವರೆಗೂ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ, ನಿಮ್ಮೆಲ್ಲರ ಪ್ರೀತಿ,ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

ಮೇಲುಕೋಟೆ ಕ್ಷೇತ್ರದ ನನ್ನ ಹಿತೈಷಿ, ಬೆಂಬಲಿಗರು, ಜನತೆಗೆ ನಾನು ರಾಜಕೀಯ ಜನನಾಯಕನಾಗಬೇಕು ಎಂಬ ಬಯಕೆಯಿದೆ. ಆದರೆ, ಅದಕ್ಕೆ ಸೂಕ್ತವಾದ ಕಾಲ ಬಂದಿಲ್ಲ. ಸಮಯ, ಸಂದರ್ಭ, ಕಾಲಾವಕಾಶ, ಸನ್ನಿವೇಶ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನಗೆ ರಾಜಕೀಯ ಅಧಿಕಾರ ಸಿಗಲಿ, ಸಿಗದಿರಲಿ, ನಾನಂತೂ ಸದಾ ನನ್ನ ಮೇಲುಕೋಟೆ ಕ್ಷೇತ್ರದ ಜನತೆಯ ಕಷ್ಟ, ಸುಖ, ನೋವು, ನಲಿವಿಗೆ ಸ್ಪಂದಿಸಿ ಅವರ ಪರ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಬಿ.ರೇವಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಬಿ.ಟಿ.ಮಂಜುನಾಥ್ ಮಾತನಾಡಿ, ನಮ್ಮ ನಾಯಕರಾದ ಬಿ.ರೇವಣ್ಣ ಅವರು ಮೇಲುಕೋಟೆ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕೆಲಸ- ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದರು.

ಇಂದು ಅವರ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಎಲ್ಲರೂ ಸೇರಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಕ್ಷೇತ್ರದ ಕಾರ್ಯಕರ್ತರು, ಜನತೆ ನಮ್ಮ ನಾಯಕರ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಬಿ.ರೇವಣ್ಣ ಅವರ ಶ್ರಮ ವ್ಯರ್ಥ ಮಾಡಲು ಅಭಿಮಾನಿಗಳು ಬಿಡುವುದಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಅಭಿಮಾನಿ ಬಳಗದ ಬಣ್ಣದ ಅಂಗಡಿ ಮಹದೇವು, ಲಯನ್ ಎಲ್.ಕೆ.ಜಯರಾಮು, ಶ್ರೀಧರ, ಶ್ರೀಕಂಠ, ಭರತ್ ಸೇರಿದಂತೆ ಹಲವರು ಇದ್ದರು.

Share this article