ಮಠಾಧೀಶರು ಸಮಾನತೆ ಪಥದಲ್ಲಿ ಸಾಗಬೇಕು

KannadaprabhaNewsNetwork | Published : Mar 9, 2024 1:30 AM

ಸಾರಾಂಶ

ಬಸವಣ್ಣನವರು ನೀಡಿದ ಕಾಯಕ ಮಂತ್ರವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವ ಬಸವ ತತ್ವವನ್ನು ಅಧ್ಯಯನ ಮಾಡಿ ಸಮಾಜಕ್ಕೆ ಬೋಧಿಸುವ ನಮ್ಮ ಮಠಾಧೀಶರು ಕೂಡ ಸಮಾನತೆಯ ಪಥದಲ್ಲಿ ಸಾಗಬೇಕಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಬಸವಣ್ಣನವರು ನೀಡಿದ ಕಾಯಕ ಮಂತ್ರವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವ ಬಸವ ತತ್ವವನ್ನು ಅಧ್ಯಯನ ಮಾಡಿ ಸಮಾಜಕ್ಕೆ ಬೋಧಿಸುವ ನಮ್ಮ ಮಠಾಧೀಶರು ಕೂಡ ಸಮಾನತೆಯ ಪಥದಲ್ಲಿ ಸಾಗಬೇಕಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಸುಕ್ಷೇತ್ರ ಗಚ್ಚಿನ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಗುರು ಬಸವಣ್ಣನವರು ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಜಾತಿ, ಧರ್ಮದ ಶರಣ ಶರಣೆಯರನ್ನು ಒಗ್ಗೂಡಿಸಿ ಅನುಭವ ಮಂಟಪ ಸ್ಥಾಪನೆ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶ, ಕಾಯಕ ಮಂತ್ರವನ್ನು ಬೋಧಿಸಿದರು. ಈ ಅನುಭವ ಮಂಟಪದ ಪರಿಕಲ್ಪನೆಯಿಂದಲೇ ನಮ್ಮ ದೇಶದ ಸಂವಿಧಾನ ರಚನೆಗೊಂಡಿದೆ ಎಂದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮತ್ತು ಬಸವಾದಿ ಶರಣರು ನೀಡಿದ ವಚನ ಸಂದೇಶ ಸಮ ಸಮಾಜ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿವೆ. ಶತಮಾನಗಳಿಂದಲೂ ಬೋಧನೆ ಆಗುತ್ತಿರುವ ಬಸವ ತತ್ವ ಮತ್ತು ಸಂವಿಧಾನ ಜಾರಿಗೊಂಡು 75 ವರ್ಷಗಳು ಕಳೆದರೂ ಈ ಜಾತಿ ವ್ಯವಸ್ಥೆಯಿಂದ ನಾವು ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ರಾಜಕೀಯ ವ್ಯವಸ್ಥೆಯು ಹೊರತಾಗಿಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಜಾತಿಯ ಮಾನದಂಡ ಅನುಸರಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ನಾಡಿನದ್ದಲ್ಲಕ್ಕೂ ಬಸವ ತತ್ವ ಬೋಧಿಸುವ ಮಠಾಧೀಶರು ವಿವಿಧ ಸಮುದಾಯಗಳ ಹೆಸರಿನಲ್ಲಿ ಜಗದ್ಗುರು ಪೀಠಗಳನ್ನು ಸ್ಥಾಪಿಸಿಕೊಂಡು ತಮ್ಮ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಬಸವ ತತ್ವ ಕೇವಲ ಬೋಧನೆಗೆ, ಭಾಷಣಗಳಿಗೆ ಸೀಮಿತವಾಗದೆ ಎಲ್ಲ ಮಠಾಧೀಶರು ಸಮಾನತೆಯ ಪಥದಲ್ಲಿ ಸಾಗುವುದು ಇಂದಿನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿಗೆ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತು. ಭಾರತ ರತ್ನ ನೀಡಿ ಗೌರವಿಸಿದ್ದು ಸಂತಸದ ವಿಚಾರ. ಆದರೆ ಅವರು ಕೃಷಿ ಬಗ್ಗೆ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರದೇ ಇರುವುದು ಬೇಸರದ ಸಂಗತಿಯಾಗಿದೆ. ಅವರು ನೀಡಿರುವ ವರದಿಯಲ್ಲಿ ದೇಶದ ಬೆನ್ನೆಲುಬಾಗಿರುವ ರೈತನಿಗೆ ಅನುಕೂಲವಾಗುವ ಪೂರಕ ಮಾಹಿತಿ ಇದೆ. ರೈತ ತನ್ನ ಜಮೀನಿನಲ್ಲಿ ಬೆಳೆಯುವ ಬೆಳೆಗಳ ಲಾಭ ನಷ್ಟ ಮತ್ತು ಬೆಂಬಲ ಬೆಲೆಯ ವಿಚಾರದಲ್ಲಿ ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ವರದಿಯಲ್ಲಿ ನೀಡಲಾಗಿದೆ. ಅವರ ಕೃಷಿ ವರದಿ ಎಲ್ಲೆಡೆ ಅನುಷ್ಠಾನಗೊಂಡರೆ ರೈತರು ಇಂದು ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಬರುವುದಿಲ್ಲ ಎಂದು ಹೇಳಿದರು.

ಧಾರವಾಡದ ಹಿರಿಯ ಸಾಹಿತಿ ಡಾ.ರಂಜಾನ ದುರ್ಗಾ ಮಾತನಾಡಿ, ಜಗತ್ತಿನ ಯಾವ ಧರ್ಮವು ಕೆಟ್ಟದಾಗಿಲ್ಲ, ಅವುಗಳನ್ನು ನೋಡುವ ನಮ್ಮ ಮನಸ್ಸುಗಳು ಕೆಟ್ಟದಾಗಿವೆ. 12ನೇ ಶತಮಾನದಲ್ಲಿ ಬಸವಾದಿ ಶರಣರ, ಮಾನವರ ಅನುಭವದ ಮೇಲೆ ಬಸವಧರ್ಮ ನಿರ್ಮಾಣವಾಗಿದೆ. ಶರಣ ಸಂಸ್ಕೃತಿ, ಅನುಭವ ದರ್ಶನ ಮತ್ತು ಕಾಯಕದ ಮಂತ್ರಗಳು ಮಾನವ ಧರ್ಮದ ಸಂದೇಶಗಳಾಗಿದ್ದವು. ಶರಣರು ನೀಡಿದ ವಚನ ಸಾಹಿತ್ಯಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಎಲ್ಲ ಭಕ್ತಿ ಪಂಥಗಳ ತಾಯಿಯೇ ವಚನ ಸಾಹಿತ್ಯ. ಬಸವಣ್ಣನವರು ಜಗತ್ತಿನ ಎಲ್ಲ ಜನತೆಯ ಅನುಭವಗಳನ್ನು ಅರಿತು ವಿಶ್ವಕ್ಕೆ ಅನ್ವಯವಾಗುವ ವಚನ ಸಂದೇಶವನ್ನು ನೀಡಿದರು. ಇಂದಿಗೂ ನಮ್ಮೆಲ್ಲರಿಗೆ ಬೆಳಕಾಗಿವೆ ಎಂದರು.

ನಾಲವಾರದ ಡಾ. ಸಿದ್ಧ ತೋಟೆಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ವಿಶ್ವಮಾನವ ಸಂದೇಶ ಸಾರಿದ ಬಸವಣ್ಣನವರು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಸೀಮಿತವಾಗದೇ ಅವರು ವಿಶ್ವ ಸಂಸ್ಕೃತಿಕ ನಾಯಕ ಎಂದು ಘೋಷಣೆಯಾಗಬೇಕು ಎಂದರು. ನಂತರ ಸಿರಿಗಂಧ ಸಂಸ್ಕೃತಿ ಕಲಾತಂಡದಿಂದ ಜಾನಪದ ಮತ್ತು ಕ್ರಾಂತಿ ಗೀತೆಗಳು ಜರುಗಿದವು. ಇದಲ್ಲದೇ ಬಣಜವಾಡ ಶಿಕ್ಷಣ ಸಂಸ್ಥೆಯ ಮತ್ತು ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯಗಳು ಜರುಗಿದವು. ಈ ಸಂದರ್ಭದಲ್ಲಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಮುರುಗಾ ಮಠದ ಮೋಕ್ಷ ಪತಿ ಸ್ವಾಮೀಜಿ, ಚಿಗರಹಳ್ಳಿ ಸಿದ್ದ ಬಸವ ಕಬೀರ ಸ್ವಾಮೀಜಿ, ತೆಲಸಂಗದ ವೀರೇಶ ದೇವರು, ಸಮಾಜಸೇವಕ ನ್ಯಾಯವಾದಿ ಕಲ್ಲಪ್ಪ ವಣಜೋಳ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾವಸಾಬ ಐಹೊಳೆ, ಡಾ. ರಮೇಶ ಗುಳ್ಳ, ಜಾನಪದ ಕಲಾವಿದ, ಸಾಹಿತಿ ಶ್ರೀಶೈಲ ಹುದ್ದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಾನಂದ ದಿಮಾನಮಳ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು. ರಾಮನಗೌಡ ಪಾಟೀಲ ವಂದಿಸಿದರು.

--

ಕೋಟ್‌

ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ರೈತನೇ ಬೆನ್ನೆಲುಬು. ನಮ್ಮ ರೈತರಲ್ಲಿ ಬೇಡುವ ಸಂಸ್ಕೃತಿ ಇಲ್ಲ. ದೇಶಕ್ಕೆ ಅನ್ನ ಕೊಡುವ ಸಂಸ್ಕೃತಿಯನ್ನು ಹೊಂದಿದ್ದಾರೆ. ರೈತನಿಗೆ ಯಾವುದೇ ವೇತನ, ರಜೆ ಮತ್ತು ಪಿಂಚಣಿ ಇರುವುದಿಲ್ಲ. ಆತನಿಗೆ ಕೃಷಿ ಉದ್ಯೋಗ ಮಾಡಲು ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಆರ್ಥಿಕವಾಗಿ ತಾನು ಸದೃಢವಾಗುವುದಲ್ಲದೆ ದೇಶವನ್ನು ಮುನ್ನಡೆಸುತ್ತಾನೆ.

-ಲಕ್ಷ್ಮಣ ಸವದಿ, ಮಾಜಿ ಡಿಸಿಎಂ

Share this article