ಅದ್ಧೂರಿ ಮೆರವಣಿಗೆಯೊಂದಿಗೆ ಮೈಸೂರು ಚಲೋ ಪಾದಯಾತ್ರೆ ಅಂತ್ಯ

KannadaprabhaNewsNetwork |  
Published : Aug 11, 2024, 01:41 AM IST
ಫೋಟೋ | Kannada Prabha

ಸಾರಾಂಶ

ಪಾದಯಾತ್ರೆ ಆರಂಭದಲ್ಲಿ ಬಿಸಿಲಿತ್ತು. ನಂತರ ತುಂತುರು ಮಳೆ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಎಂಡಿಎ, ವಾಲ್ಮೀಕಿ ನಿಗಮದ ಹಗರಣ ಮತ್ತು ಪರಿಶಿಷ್ಟರ ಅನುದಾನ ದುರ್ಬಳಕೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ನಡೆಸಿದ ಮೈಸೂರು ಚಲೋ ಪಾದಯಾತ್ರೆಯು ಸಮಾವೇಶ ನಡೆಸುವ ಮೂಲಕ ಸಂಪನ್ನಗೊಂಡಿತು.

ಶುಕ್ರವಾರ ಸಂಜೆಯೇ ಮೈಸೂರು ಪ್ರವೇಶಿಸಿದ್ದ ಪಾದಯಾತ್ರೆಯು ನಗರದ ವಿವಿಧೆಡೆ ಉಳಿದಿತ್ತು. ಶನಿವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಬಳಿಕ ಕೆ.ಆರ್‌. ವೃತ್ತದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಮುಂದುವರೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಪಾದಯಾತ್ರೆ ಅಂತಿಮಗೊಳಿಸುವ ಮೂಲಕ ಮೈತ್ರಿ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಭರ್ಜರಿ ಟಾಂಗ್ ನೀಡಿದರು. ಕಳೆದ ಎಂಟು ದಿನಗಳಿಂದ ಮಳೆ, ಗಾಳಿ, ಬಿಸಿಲು ಎನ್ನದೆ 140 ಕಿ.ಮೀ. ಪಾದಾಂತ್ರೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರದ ವಿರುದ್ಧ ರಣಕಹಳೆ ಮೊಳಗಿಸಿದರು.

ಶನಿವಾರ ಬೆಳಗ್ಗೆ 10 ಗಂಟೆ ವೇಳೆ ಪಾದಯಾತ್ರೆ ಆರಂಭಿಸಲು ರಾಘವೇಂದ್ರಸ್ವಾಮಿ ಮಠದ ಎದುರಿನಲ್ಲಿ ಸಹಸ್ರ ಸಹಸ್ರಾರು ಮಂದಿ ಮೈತ್ರಿ ಪಕ್ಷದ ಕಾರ್ಯಕರ್ತರು, ಮುಖಂಡರು ತಂಡೋಪ ತಂಡವಾಗಿ ಜವಾಯಿಸತೊಡಗಿದರು. ಕೇಸರಿ ಮತ್ತು ಹಸಿರು ಶಾಲು ಧರಿಸುವುದರೊಂದಿಗೆ ಎರಡು ಪಕ್ಷಗಳ ಬಾವುಟಗಳನ್ನು ಹಾರಿಸುತ್ತಾ ತಮ್ಮ ಪಕ್ಷದ ನಾಯಕರ ಪರ ಘೋಷಣೆ ಕೂಗಿದರು.

ಆದರೆ ಬಿ.ವೈ. ವಿಜಯೇಂದ್ರ ಅವರು ಮೆರವಣಿಗೆ ಸ್ಥಳಕ್ಕೆ ಬಂದಾಗ 12 ಗಂಟೆ ಆಗಿತ್ತು. ಪಾದಯಾತ್ರೆ ಆರಂಭದಲ್ಲಿ ಬಿಸಿಲಿತ್ತು. ನಂತರ ತುಂತುರು ಮಳೆ ಆರಂಭವಾಯಿತು. ಮಳೆಯ ನಡುವೆಯೂ ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ರಾಮಸ್ವಾಮಿ ವೃತ್ತಕ್ಕೆ ಬರುತ್ತಿದ್ದಂತೆ ಮಹಾರಾಜ ಕಾಲೇಜು ಮೈದಾನಕ್ಕೆ ತೆರಳುತ್ತಿದ್ದ ಮೈತ್ರಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಜತೆಯಾದರು. ಮೈದಾನ ತಲುಪುವ ಹೊತ್ತಿಗೆ ಪಾದಯಾತ್ರೆಯಲ್ಲಿನ ಜನರ ಸಂಖ್ಯೆ ದ್ವಿಗುಣಗೊಂಡಿತ್ತು. ರಾಮಸ್ವಾಮಿ ವೃತ್ತದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಬೃಹತ್‌ಕಟೌಟ್‌ ಗೆ ಪುಷ್ಪವೃಷ್ಟಿ ಹರಿಸಲಾಯಿತು. ಈ ವೇಳೆ ಅಭಿಮಾನಿಗಳು ಬೃಹತ್‌ಸೇಬಿನ ಹಾರವನ್ನು ಕ್ರೇನ್‌ ಮೂಲಕ ವಿಜಯೇಂದ್ರ ಮತ್ತು ನಿಖಿಲ್‌ಕುಮಾರಸ್ವಾಮಿ ಅವರಿಗೆ ಅರ್ಪಿಸಿದರು.

ಮಧ್ಯಾಹ್ನ 1 ಗಂಟೆ ವೇಳೆ ಪಾದಯಾತ್ರೆ ಅಂತ್ಯಗೊಂಡಿತು. ಏಕ ಕಾಲದಲ್ಲಿ ಎಲ್ಲರೂ ಮೈದಾನ ಪ್ರವೇಶಿಸಲು ಮುಂದಾದಾಗ ಕೆಲ ಕಾಲ ಜನದಟ್ಟಣೆ ಉಂಟಾಯಿತು. ಕೊನೆಗೆ ಪೊಲೀಸರು ನೂಕು ನುಗ್ಗಲು ತಪ್ಪಿಸಿ ಎಲ್ಲರೂ ಮೈದಾನಕ್ಕೆ ತೆರಳಲು ಅವಕಾಶ ಕಲ್ಪಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ