ಬಿಜೆಪಿಯಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ: ತಂಗಡಗಿ

KannadaprabhaNewsNetwork | Published : Aug 3, 2024 12:31 AM

ಸಾರಾಂಶ

ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿಲ್ಲ. ಶೋಕಾಸ್ ನೋಟಿಸ್ ಕೊಟ್ಟಿರುವುದು ಕಾನೂನುಬಾಹಿರ. ಸಂವಿಧಾನಕ್ಕೆ ವಿರುದ್ಧ ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾರಟಗಿ: ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್ ಕಾನೂನುಬಾಹಿರ. ಇದು ಸಂವಿಧಾನದ ಕೊಲೆ. ಪ್ರಜಾಪ್ರಭುತ್ವದ ನಾಶ ಮಾಡುವ ಕ್ರಮ, ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನಲ್ಲಿ ನದಿ ಪಾತ್ರದ ಹಳ್ಳಿಗಳಿಗೆ ಉಂಟಾಗಿರುವ ನದಿ ಪ್ರವಾಹವನ್ನು ಶುಕ್ರವಾರ ವೀಕ್ಷಿಸಿ, ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿಲ್ಲ. ಶೋಕಾಸ್ ನೋಟಿಸ್ ಕೊಟ್ಟಿರುವುದು ಕಾನೂನುಬಾಹಿರ. ಸಂವಿಧಾನಕ್ಕೆ ವಿರುದ್ಧ ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೆ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡಬಾರದು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ನಾವು ಯಾವುದೇ ಪಿತೂರಿಗೆ ಬಗ್ಗುವುದಿಲ್ಲ ಎಂದು ತಂಗಡಗಿ ಹೇಳಿದರು.

ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶುದ್ಧಹಸ್ತದ ಮುಖ್ಯಮಂತ್ರಿ ಅವರಿಗೆ ತೊಂದರೆ ನೀಡುವ ಕೆಲಸ ಆಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಸ್ವಾಲಿನ್ ಹಾಗೂ ಕರ್ನಾಟಕದಲ್ಲಿ ನಮ್ಮ ಮುಖ್ಯಮಂತ್ರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಇನ್ನು ಬಿಜೆಪಿಯವರು ಮೈಸೂರಿಗೆ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ತಂಗಡಗಿ, ಪಾದಯಾತ್ರೆ ನಡೆಸಲಿರುವುದರಿಂದ ಆ ಪಕ್ಷದ ಮುಖಂಡರ ಆರೋಗ್ಯ ಸುಧಾರಿಸಲಿದೆ ಎಂದು ಲೇವಡಿ ಮಾಡಿದರು. ಈ ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಅವರ ಕಾಲದ ಹಗರಣವನ್ನು ಒಂದೊಂದಾಗಿ ಹೊರ ತೆಗೆದು ರಾಜ್ಯದ ಜನತೆ ಮುಂದಿಡುತ್ತೇವೆ ಎಂದರು.

ಮುಡಾ ಹಗರಣ: ಅಬ್ರಹಾಂ ದೊಡ್ಡ ಬ್ಲಾಕ್ ಮೇಲರ್:ಮುಡಾ ಹಗರಣದಲ್ಲಿ ಅನಾವಶ್ಯಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ದೊಡ್ಡ ಬ್ಲಾಕ್ ಮೇಲರ್ ಆಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ಗಂಗಾವತಿ ತಾಲೂಕಿನ ಚಿಕ್ಕಜಂತಗಲ್- ಕಂಪ್ಲಿ ಸೇತುವೆ ಮೇಲೆ ನೀರು ಬಂದಿರುವುದನ್ನು ವೀಕ್ಷಿಸಿದ ಆನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಈ ಹಿಂದೆ ಒಂದು ಪ್ರಕರಣದಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಅಬ್ರಹಾಂ ಅವರಿಗೆ ಸುಪ್ರೀಂ ಕೋರ್ಟ್ ₹20 ಲಕ್ಷ ದಂಡ ವಿಧಿಸಿತ್ತು. ಈಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಅರೋಪ ಮಾಡಿದ್ದಾರೆ. ಇದರಲ್ಲಿ ಹುರುಳಿಲ್ಲ. ಈಗಾಗಲೇ ಮುಖ್ಯಮಂತ್ರಿ ರಾಜ್ಯಪಾಲರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಗಟ್ಟಿ ಇದೆ ಎಂದರು.ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ರಾಜ್ಯದ ಜನತೆ ನೋಡುತ್ತಿದ್ದು, ಈ ಹಿಂದೆ ಬಿಜೆಪಿ ಆಡಳಿತ ಇದ್ದಾಗಲೇ ಮುಖ್ಯಮಂತ್ರಿಗೆ ನಿವೇಶನ ನೀಡಿದ್ದಾರೆ ಎಂದರು. ಸಿಎಂ ಜತೆ ನಮ್ಮ ಸಚಿವರ ದಂಡು ಇದೆ ಎಂದರು.

ಈಗಾಗಲೇ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ 22ಕ್ಕೂ ಹೆಚ್ಚು ಭ್ರಷ್ಟಾಚಾರ ಹಗರಣವನ್ನು ಹೊರ ತೆಗೆದಿದ್ದೇವೆ. ಎಳೆ ಎಳೆಯಾಗಿ ರಾಜ್ಯ ಜನತೆಗೆ ತಿಳಿಸುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್‌ನವರು ಪಾದಯಾತ್ರೆ ನಡೆಸಲಿದ್ದಾರೆ. ಅದರ ಹಿಂದೆಯೇ ನಾವು ಪಾದಯಾತ್ರೆ ನಡೆಸುವುದಾಗಿ ಹೇಳಿದರು.

Share this article