ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ : ಏ.9ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ

KannadaprabhaNewsNetwork | Updated : Apr 08 2025, 05:26 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.9ರಂದು ನಡೆಯಲಿದೆ.

 ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ   ವಿರುದ್ಧ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.9ರಂದು ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಬೆಲೆ ಏರಿಕೆ, ದಲಿತರ ಹಣ ಲೂಟಿ, ಹಿಂದೂ ವಿರೋಧಿ ನೀತಿ, ಮುಸ್ಲಿಂ ಓಲೈಕೆ, ರೈತರ ನಿರ್ಲಕ್ಷ್ಯ ಇತ್ಯಾದಿಗಳ ಕುರಿತು ಜನರ ಆಕ್ರೋಶದ ಬಿಸಿಯನ್ನು ರಾಜ್ಯ ಸರ್ಕಾರಕ್ಕೆ ಮುಟ್ಟಿಸುವ ಭಾಗವಾಗಿ ಈ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಏ.9ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ಸರ್ಕಲ್‌ನಿಂದ ಕ್ಲಾಕ್ ಟವರ್‌ವರೆಗೆ ಈ ಯಾತ್ರೆ ನಡೆಯಲಿದೆ ಎಂದರು.

ಈ ಬೃಹತ್ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವತ್ಥ್‌ ನಾರಾಯಣ್, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ಸಹಿತ ಅನೇಕ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದು, ಈಗಾಗಲೇ ಹೋರಾಟದ ಯಶಸ್ಸಿಗೆ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ವೇದವ್ಯಾಸ ಕಾಮತ್‌ ತಿಳಿಸಿದರು.

ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯ ಹಿಂದೆಂದೂ ಕಂಡಿರದಂತಹ ದುರಾಡಳಿತವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಒಂದು ಅಸಮರ್ಥ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳಲು ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ಆ ನಿಟ್ಟಿನಲ್ಲಿ ಇದೀಗ ಜನತೆಯ ನೋವಿಗೆ ಧ್ವನಿಯಾಗಿ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ. ಬೆಲೆಯೇರಿಕೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಎಲ್ಲ ವರ್ಗದವರು, ದಲಿತರು, ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಪೂರ್ಣಿಮಾ, ರಮೇಶ್ ಹೆಗ್ಡೆ, ಕಿರಣ್ ರೈ, ಜಯಲಕ್ಷ್ಮಿ ಶೆಟ್ಟಿ ಇದ್ದರು.

Share this article