ಪಂಚಮಸಾಲಿ ಮೀಸಲು ಹೋರಾಟಗಾರರ ಮೇಲಿನ ಲಾಠಿ ಪ್ರಹಾರ : ಸ್ಪೀಕರ್‌ ಕಚೇರಿಯಲ್ಲಿ ಬಿಜೆಪಿ-ಕಾಂಗ್ರೆಸ್‌ ಯುದ್ಧ

KannadaprabhaNewsNetwork |  
Published : Dec 13, 2024, 12:47 AM ISTUpdated : Dec 13, 2024, 01:09 PM IST
Belagavi Suvarna Soudha

ಸಾರಾಂಶ

ಪಂಚಮಸಾಲಿ ಮೀಸಲು ಹೋರಾಟಗಾರರ ಮೇಲಿನ ಲಾಠಿ ಪ್ರಹಾರ ಘಟನೆ ಕುರಿತ ಚರ್ಚೆ ವೇಳೆ ಸ್ಪೀಕರ್‌ ಯು.ಟಿ. ಖಾದರ್ ಅವರು ಪಕ್ಷಪಾತ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಸಿಟ್ಟಿಗೆದ್ದ ಬಿಜೆಪಿ ಶಾಸಕರು ಸದನ ಮುಂದೂಡಿಕೆ ವೇಳೆ ಸ್ಪೀಕರ್‌ ಕಚೇರಿಗೆ ನುಗ್ಗಿ ಗದ್ದಲ ಎಬ್ಬಿಸಿದ ಘಟನೆ ನಡೆದಿದೆ.

 ಸುವರ್ಣ ವಿಧಾನಸಭೆ :  ಪಂಚಮಸಾಲಿ ಮೀಸಲು ಹೋರಾಟಗಾರರ ಮೇಲಿನ ಲಾಠಿ ಪ್ರಹಾರ ಘಟನೆ ಕುರಿತ ಚರ್ಚೆ ವೇಳೆ ಸ್ಪೀಕರ್‌ ಯು.ಟಿ. ಖಾದರ್ ಅವರು ಪಕ್ಷಪಾತ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಸಿಟ್ಟಿಗೆದ್ದ ಬಿಜೆಪಿ ಶಾಸಕರು ಸದನ ಮುಂದೂಡಿಕೆ ವೇಳೆ ಸ್ಪೀಕರ್‌ ಕಚೇರಿಗೆ ನುಗ್ಗಿ ಗದ್ದಲ ಎಬ್ಬಿಸಿದ ಘಟನೆ ನಡೆದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್‌ ಸದಸ್ಯರು ಸ್ಪೀಕರ್‌ ಬೆಂಬಲಕ್ಕೆ ನಿಂತಾಗ ಎರಡೂ ಪಕ್ಷಗಳ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಕೋಲಾಹಲಕರ ವಾತಾವರಣ ನಿರ್ಮಾಣ‍ವಾಯಿತು.

ಸದನದಲ್ಲಿ ಲಾಠಿ ಪ್ರಹಾರ ಘಟನೆ ಚರ್ಚೆಯ ವೇಳೆ ಗೃಹ ಸಚಿವರ ಉತ್ತರದ ನಂತರ ಮತ್ತೊಬ್ಬ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮಾತನಾಡಲು ಅವಕಾಶ ನೀಡಿದ ಸ್ಪೀಕರ್‌ ಅವರ ಧೋರಣೆ ಬಿಜೆಪಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿತ್ತು. ಲಾಠಿ ಪ್ರಹಾರ ಘಟನೆ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂಬುದು ಬಿಜೆಪಿ ಶಾಸಕರ ವಾದವಾಗಿತ್ತು. ಆದರೆ, ಪಂಚಮಸಾಲಿ ಮೀಸಲು ಸಂಬಂಧ ಹಿಂದಿನ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ ವಿಚಾರವನ್ನು ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ್ದು ಬಿಜೆಪಿ ನಾಯಕರಿಗೆ ಸಹಿಸಲಾಗಲಿಲ್ಲ.

ಸದನ ನಿಮ್ಮನೆ ಎಂದುಕೊಂಡಿರುವಿರಾ?:

ಈ ವೇಳೆ ಬಿಜೆಪಿಯ ಸುನೀಲ್‌ಕುಮಾರ್‌ ಎತ್ತಿದ ಕ್ರಿಯಾಲೋಪವನ್ನು ಸ್ಪೀಕರ್‌ ಪರಿಗಣಿಸಲಿಲ್ಲ. ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಶುರು ಮಾಡಿದ್ದರಿಂದ ಸ್ಪೀಕರ್‌ ಅವರು ಕಲಾಪವನ್ನು ಮುಂದೂಡಿ ಪೀಠದಿಂದ ತಮ್ಮ ಕಚೇರಿಯತ್ತ ತೆರಳಿದರು. ಕಲಾಪ ಮುಂದೂಡಿದ ನಂತರ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಶಾಸಕರಾದ ಸುನೀಲ್‌ ಕುಮಾರ್‌, ಸಿದ್ದು ಸವದಿ, ಬಿ.ವೈ. ವಿಜಯೇಂದ್ರ, ಸುರೇಶ್‌ ಗೌಡ ಸೇರಿದಂತೆ ಇತರರು ಸ್ಪೀಕರ್‌ ಕಚೇರಿಗೆ ನುಗ್ಗಿದರು. ಈ ವೇಳೆ ಸುನೀಲ್‌ಕುಮಾರ್‌ ಹಾಗೂ ಇತರ ಶಾಸಕರು ಸ್ಪೀಕರ್‌ ಅವರ ಮೇಲೆ ವಾಗ್ದಾಳಿ ನಡೆಸಿ, ‘ಸದನವನ್ನು ನಿಮ್ಮ ಮನೆ ಎಂದುಕೊಂಡಿದ್ದೀರಾ? ಸದನ ಸಾರ್ವಜನಿಕ ಆಸ್ತಿ. ಅದನ್ನು ನಿಯಮ ಪಾಲಿಸದೇ ನಡೆಸುತ್ತಿದ್ದೀರಿ’ ಎಂದು ಏರುಧ್ವನಿಯಲ್ಲಿ ಗದ್ದಲ ಎಬ್ಬಿಸಿದರು.

ಆಗಲೂ ಸ್ಪೀಕರ್‌ ಯು.ಟಿ. ಖಾದರ್‌ ಶಾಂತವಾಗಿಯೇ, ‘ಸಮಾಧಾನವಾಗಿರಿ, ಚರ್ಚಿಸೋಣ’ ಎಂದು ಹೇಳುತ್ತಿದ್ದರು. ಆದರೂ, ಬಿಜೆಪಿ ಶಾಸಕರ ಗದ್ದಲ ಮಾತ್ರ ನಿಲ್ಲಲಿಲ್ಲ.

ಅದೇ ವೇಳೆ ಕಾಂಗ್ರೆಸ್‌ನ ನರೇಂದ್ರಸ್ವಾಮಿ, ಶರತ್‌ ಬಚ್ಚೇಗೌಡ, ಶಿವಲಿಂಗೇಗೌಡ ಸೇರಿದಂತೆ ಇತರರು ಸ್ಪೀಕರ್‌ ಕಚೇರಿಯಲ್ಲಿನ ಗದ್ದಲ ಗಮಿಸಿ ಅಲ್ಲಿಗೆ ಬಂದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ಶಾಸಕರ ನಡುವಿನ ಗದ್ದಲ ಕೈಕೈ ಮಿಲಾಯಿಸುವ ಹಂತಕ್ಕೆ ತೆರಳಿತು. ಕೊನೆಗೆ ಗದ್ದಲ ತಿಳಿದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ಸ್ಪೀಕರ್‌ ಕಚೇರಿಗಾಗಮಿಸಿದರು. ಕೊನೆಗೆ ಬಿಜೆಪಿ ಶಾಸಕರು ಈ ಕುರಿತು ಸದನದಲ್ಲಿ ಮಾತನಾಡುತ್ತೇವೆ ಎಂದು ಅಲ್ಲಿಂದ ತೆರಳಿದರು.

ಬಿಜೆಪಿಗರು ಹೇಳಿದ್ದನ್ನೆಲ್ಲಾನಾವು ಕೇಳಬೇಕಾ?: ಸಿದ್ದು

ಬಿಜೆಪಿ ಶಾಸಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ಶಾಸಕರೇನು ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರಾ? ಅವರು ಹೇಳಿದ್ದನ್ನೆಲ್ಲ ಕೇಳಬೇಕಾ? ಅವರು ಹೇಳಿದ್ದೇ ವೇದವಾಕ್ಯಾನಾ’ ಎಂದು ಪ್ರಶ್ನಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ