ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಸಮಾಜದವರನ್ನು ಟಾರ್ಗೆಟ್ ಮಾಡುತ್ತಿದೆ. ಈ ಮೊದಲು ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ, ಹಗರಣ ನಡೆದಿದೆ ಎಂದು ಸಚಿವರಾಗಿದ್ದ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಇಳಿಸಿದರು ಎಂದು ದೂರಿದರು.
ಹಾಗೆಯೆ, ಆರ್ ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ವಾಲ್ಮೀಕಿ ಸಮಾಜಕ್ಕೆ ಸೇರಿದ ದಯಾನಂದ್ ಅವರನ್ನು ಅಮಾನತು ಮಾಡಿದರು. ಈಗ ಅದೇ ಸಮಾಜಕ್ಕೆ ಸೇರಿದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದಲೇ ವಜಾ ಮಾಡಿದ್ದಾರೆ. ಈ ರೀತಿ ಮಾಡುವುದಕ್ಕೆ ರಾಜಣ್ಣ ಏನು ತಪ್ಪು ಮಾಡಿದ್ದಾರೆ ಎಂಬುದರ ಬಗ್ಗೆ ಕಾರಣ ಹೇಳಬೇಕು ಎಂದು ಅವರು ಒತ್ತಾಯಿಸಿದರು.ಯಾರ ಅಪ್ಪಣೆ ಮೇಲೆ ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ವಜಾ ಮಾಡಲಾಗಿದೆ ಎಂದು ಜನರಿಗೆ ತಿಳಿಸಿ. ರಾಹುಲ್ ಗಾಂಧಿ ಆದೇಶದ ಮೇಲೆ ವಜಾ ಮಾಡಲಾಗಿದೆ ಎನ್ನುವುದಾದರೆ ಸಚಿವರ ನೇಮಕ, ವಜಾ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿಲ್ಲ ಎಂಬಂತಾಗುತ್ತದೆ. ನಡತೆ, ಮಾತಿನಲ್ಲಿ ಅರ್ಥವಿಲ್ಲದಂತಾಗುತ್ತದೆ. ಇಷ್ಟ ಬಂದಂತೆ ಆಡಳಿತ ನಡೆಸಲು ಆಗಲ್ಲ ಎಂದು ಅವರು ಕಿಡಿಕಾರಿದರು.
ಸಚಿವರಾದ ಸಂತೋಷ್ ಲಾಡ್, ಜಮೀರ್ ಖಾನ್ ಮೇಲೆ ಹಲವು ಆರೋಪ ಮಾಡಿದ್ದೇವೆ. ಆದರೆ, ಅವರ ಮೇಲೆ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ. ಕಳ್ಳರು, ದರೋಡೆಕೋರರು, ಭ್ರಷ್ಟಾಚಾರಿಗಳನ್ನು ಇಟ್ಟುಕೊಂಡಿರುವ ಸಚಿವರ ಮೇಲೆ ಕ್ರಮ ಕೈಗೊಳ್ಳದೆ, ಸತ್ಯ ಹೇಳಿದ ರಾಜಣ್ಣರ ಮೇಲೆ ಕ್ರಮ ಕೈಗೊಳ್ಳುತ್ತೀರಿ. ಒಂದೇ ಜನಾಂಗದವರನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ? ಮುಂದಿನ ಟಾರ್ಗೆಟ್ ಸತೀಶ್ ಜಾರಕಿಹೊಳಿ ಅವರಾ ಎಂದು ಅವರು ಪ್ರಶ್ನಿಸಿದರು.ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಬಿ.ಎಂ. ಸಂತೋಷ್ ಕುಮಾರ್ ಇದ್ದರು.