ಮಳೆಯಿಂದ ಮನೆ ಕಳೆದುಕೊಂಡವರಿಗೆ ₹10 ಲಕ್ಷ ಪರಿಹಾರ ನೀಡಲು ಬಿಜೆಪಿ ಆಗ್ರಹ

KannadaprabhaNewsNetwork | Published : Oct 2, 2024 1:07 AM

ಸಾರಾಂಶ

ಮಳೆಯಿಂದ ಜಿಲ್ಲೆಯಲ್ಲಿ ಹಲವರು ಮನೆಯನ್ನು ಕಳೆದುಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಪೂರ್ತಿ ಮನೆ ಕಳೆದುಕೊಂಡವರಿಗೆ ಕೇವಲ ಕಣ್ಣೊರೆಸುವ ತಂತ್ರದ ಭಾಗವಾಗಿ ಕೇವಲ ₹೧ ಲಕ್ಷ ಪರಿಹಾರ ನೀಡುತ್ತಿದೆ.

ಶಿರಸಿ: ಜಿಲ್ಲೆಯಲ್ಲಿ ಮಳೆಯಿಂದ ಸೂರು ಕಳೆದುಕೊಂಡ ಬಡವರಿಗೆ ಮನೆ ಕಟ್ಟಿಕೊಳ್ಳಲು ₹10 ಲಕ್ಷ ಪರಿಹಾರ ನೀಡಬೇಕು. ಕೊಳೆರೋಗರಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಒತ್ತಾಯಿಸಿದರು.ಮಂಗಳವಾರ ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಅಡಕೆ ಬೆಳೆಹಾನಿ, ಕೊಳೆರೋಗಕ್ಕೆ ಪರಿಹಾರ ಮತ್ತು ಮಳೆಯಿಂದ ಮನೆ ಕಳೆದುಕೊಂಡ ಬಡವರಿಗೆ ರಾಜ್ಯ ಸರ್ಕಾರದಿಂದ ಮನೆ ಕಟ್ಟಿಸಿಕೊಡಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು. ಮಳೆಯಿಂದ ಜಿಲ್ಲೆಯಲ್ಲಿ ಹಲವರು ಮನೆಯನ್ನು ಕಳೆದುಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಪೂರ್ತಿ ಮನೆ ಕಳೆದುಕೊಂಡವರಿಗೆ ಕೇವಲ ಕಣ್ಣೊರೆಸುವ ತಂತ್ರದ ಭಾಗವಾಗಿ ಕೇವಲ ₹೧ ಲಕ್ಷ ಪರಿಹಾರ ನೀಡುತ್ತಿದೆ. ಭಾಗಶಃ ಹಾನಿಯಾದಲ್ಲಿ ₹೫ರಿಂದ ₹೧೦ ಸಾವಿರ ನೀಡುತ್ತಿದೆ. ಈ ಪರಿಹಾರ ಮನೆ ಕಟ್ಟಲು ಎಲ್ಲಿ ಸಾಕಾಗುತ್ತದೆ. ಇಂದಿನ ಕಾಲದಲ್ಲಿ ಸುಸಜ್ಜಿತ ಶೌಚಾಲಯ ಕಟ್ಟಲು ₹೧ ಲಕ್ಷ ಬೇಕಾಗುತ್ತದೆ. ಇದೆಲ್ಲವೂ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ತಿಳಿದಿಲ್ಲವೇ? ಜಿಲ್ಲೆಯಲ್ಲಿ ೧೫೬ ಬಡ ಜನರು ಸಂಪೂರ್ಣವಾಗಿ ಮನೆಯನ್ನು ಕಳೆದುಕೊಂಡಿದ್ದಾರೆ. ೫೮೬ ಜನರ ಮನೆ ಭಾಗಶಃ ಹಾನಿಯಾಗಿದೆ. ತಮ್ಮ ಹೈಕಮಾಂಡ್ ಮೆಚ್ಚಿಸಲು ಕೇರಳಕ್ಕೆ ಮನೆ ಕಟ್ಟಿಕೊಡುವ ಸಿದ್ದರಾಮಯ್ಯನವರಿಗೆ, ಜಿಲ್ಲೆಯ ಜನರು ಕಾಣುವುದಿಲ್ಲವೇ? ನಾವ್ಯಾರು ಭಿಕ್ಷೆ ಕೇಳುತ್ತಿಲ್ಲ, ಜನರ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಾ ಎಂದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಕೊಳೆರೋಗದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬಹುತೇಕ ಭಾಗದಲ್ಲಿ ಬೆಳೆಹಾಳಾಗಿದೆ. ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಪರಿಹಾರ ನೀಡಬೇಕು. ಜಿಲ್ಲೆಯ ರೈತರಿಗೆ ವಿಶೇಷ ಪರಿಹಾರದ ಪ್ಯಾಕೇಜನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿದರು. ನಗರಸಭೆ ಅಧ್ಯಕ್ಷ ಶರ್ಮಿಳಾ ಮಾದನಗೇರಿ, ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್, ಪಕ್ಷದ ಪ್ರಮುಖರಾದ ನಂದನ ಸಾಗರ, ಜಿಪಂ ಮಾಜಿ ಸದಸ್ಯೆ ಶೋಭಾ ನಾಯ್ಕ, ಅಂಕೋಲಾ ರೈತ ಮೋರ್ಚಾ ಅಧ್ಯಕ್ಷ ಎಂ.ಎನ್. ಭಟ್ಟ, ಪ್ರಮುಖರಾದ ಜಿ.ಆರ್. ಹೆಗಡೆ ಬೆಳ್ಳೆಕೇರಿ, ನಾಗರಾಜ ನಾಯ್ಕ, ರವಿಚಂದ್ರ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.ಮಾನವೀಯತೆ ಇರಲಿ: ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವ ಗುಣ ರಾಜಕೀಯ ನಾಯಕರಿಗೆ ಮೊದಲು ಇರಬೇಕು. ಸರ್ಕಾರ ತಮಗೆ ಗೂಟದ ಕಾರು, ಪಗಾರ ಎಲ್ಲವನ್ನೂ ನೀಡಿದೆ. ರಾಜಕಾರಣಿಗಳಿಗೆ ಮೊದಲು ಮಾನವೀಯತೆ ಇರಬೇಕು. ರಾಜಕೀಯ ಮಾಡುವ ಮೊದಲು ಬಡವರಿಗೆ ಪರಿಹಾರ ದೊರಕಿಸಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹಿಸಿದರು.

Share this article