ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಸಾಯಿವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ, ನೂತನವಾಗಿ ಆಯ್ಕೆಯಾದ ಸಂಸದ ರಮೇಶ ಜಿಗಜಿಣಗಿಗೆ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಬಾರಿ ಕೇಂದ್ರ ಮಂತ್ರಿ ಮಂಡಳ ಮಾಡುವಾಗ ರಾಜ್ಯದ ಯಾವ ಸಂಸದರೂ ನನ್ನ ಹೆಸರನ್ನು ಪ್ರಧಾನ ಮಂತ್ರಿಗಳಿಗೆ ಹೇಳಲಿಲ್ಲ. ಇದರಿಂದ ನನಗೆ ನೋವಾಗಿದ್ದು ನಿಜ. ನಾನು ಯಾವತ್ತೂ ಜೀವನದಲ್ಲಿ ಅಧಿಕಾರ, ಹಣ ಬಯಸಿಲ್ಲ. ಚುನಾವಣೆಯ ಸಂದರ್ಭದಲ್ಲಿಯೂ ಬಹಳಷ್ಟು ಸಹಿಸಿಕೊಂಡು ಬಂದಿದ್ದೇನೆ. ಬೇರೆ ಬೇರೆ ಸಮಾಜದ ಎಲ್ಲರೂ ನನ್ನನ್ನು ಪ್ರೀತಿ ಮಾಡಿದರು, ಆದರೆ ನಮ್ಮ ಜನ (ಬಿಜೆಪಿ) ನಮ್ಮನ್ನು ಪ್ರೀತಿ ಮಾಡಲ್ಲ ಎಂದು ಅಸಮಾಧಾನ ಹೊರಹಾಕಿದರು.ನರೇಂದ್ರ ಮೋದಿಯವರು ನನ್ನ ಮೇಲೆ ವಿಶ್ವಾಸವಿಟ್ಟು ಮೂರು ವರ್ಷಗಳ ಕಾಲ ಸಚಿವನನ್ನಾಗಿ ಮಾಡಿದ್ದರು. ಅದನ್ನು ಬಿಟ್ಟು ಯಾವುದಕ್ಕೂ ನನ್ನ ಮಾತನಾಡಿಸಲಿಲ್ಲ. ಆದರೂ ನಾನು ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ. ನನ್ನ ನಿರ್ಲಕ್ಷ್ಯ ಮಾಡಿದ್ದರಿಂದ ನನಗೆ ಹಾನಿಯಾಗಿಲ್ಲ. ಹಾನಿ ಪಕ್ಷಕ್ಕೆ ಆಗಿದೆ. ಈತ ಸಂಘ ಪರಿವಾರದವನು ಅಲ್ಲ. ಜನತಾ ಪರಿವಾರದಿಂದ ಬಂದು ಪಕ್ಷ ಸೇರಿದ್ದಾನೆ ಎಂದು ತಿಳಿದುಕೊಂಡು ಪಕ್ಷದ ಕೆಲಸ ಕಾರ್ಯದಲ್ಲಿ ಇನ್ವಾಲ್ವ್ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸೇರಬೇಡ ಎಂದಿದ್ದರು:
2004ರಲ್ಲಿ ಜಗದೀಶ ಶೆಟ್ಟರ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ಮನೆಗೆ ಹೋಗಿ ಬಿಜೆಪಿ ಸೇರುತ್ತೇನೆ ಎಂದೆ. ಯಡಿಯೂರಪ್ಪ, ಅನಂತಕುಮಾರ ಭೇಟಿಯಾದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಬಿಜೆಪಿ ಸಂಸದನಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ ಎಂದರು.
ನಾನು ಚುನಾವಣೆ ಪ್ರಚಾರಕ್ಕೆ ಹೋದಾಗ ಹಳ್ಳಿ ಹಳ್ಳಿಯಲ್ಲೂ ಜನ ನನಗೆ ನೀ ಸತ್ತರೂ ನಿನ್ನ ಹೆಣಕ್ಕೆ ಓಟ್ ಹಾಕ್ತಿವಿ ಎಂದು ಹೇಳಿದ್ದರು. ನಿಮ್ಮ ಶ್ರಮ ಹಾಗೂ ಜನರ ಆಶೀರ್ವಾದದಿಂದ ನಾನು ಮತ್ತೆ ಎಂಪಿ ಆಗಿದ್ದೇನೆ. ಚುನಾವಣೆ ವೇಳೆ ನಾನು ಎಲೆಕ್ಷನ್‌ಗೆ ನಿಂತೇ ನಿಲ್ಲುತ್ತೇನೆ ಎಂದಿದ್ದೆ. ಬಿಜೆಪಿಯಲ್ಲಿ ಟಿಕೆಟ್ ಕೊಡದಿದ್ದರೆ ಪಕ್ಷ ಬಿಟ್ಟು ಹೋಗ್ತಾರೇನೋ ಎಂದುಕೊಂಡಿದ್ದರು. ಯಾರೂ ಸಂದೇಹ ಪಡಬೇಕಿಲ್ಲ. ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆಯಾಗುತ್ತದೆ. ಅಧಿಕಾರ ಇರಲಿ ಬಿಡಲಿ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ ಮಾತನಾಡಿ, ಜುಲೈ 30ರೊಳಗಾಗಿ ಎಲ್ಲಾ ಮಂಡಳಗಳು, ಕಾರ್ಯಕಾರಿಣಿ ಮುಗಿಸಬೇಕು. ಅಗತ್ಯವಿದ್ದಲ್ಲಿ ಕಾರ್ಯಕಾರಿಣಿ ಪದಾಧಿಕಾರಿಗಳ ಬದಲಾವಣೆ ಮಾಡಿ. ಕಾಂಗ್ರೆಸ್‌ನವರು ಎಸ್ಸಿ ಎಸ್ಟಿ ಜನರ ಹಣವನ್ನು ದುರುಪಯೋಗ ಮಾಡಿದ್ದಾರೆ. ಆ ಹಣ ಎಲ್ಲಿ ಹೋಗಿದೆ ಎಂಬುದು ಗೊತ್ತಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಣವನ್ನು ನೇರ ವರ್ಗಾವಣೆ ಮಾಡಿ ಕೊಳ್ಳೆ ಹೊಡೆದಿದ್ದಾರೆ. ನಾವೆಲ್ಲ ಬೆನ್ನುಹತ್ತಿ ಹೋರಾಟ ಮಾಡಿದಾಗ ಮಾತ್ರ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಇಷ್ಟಾದರೂ ಕ್ರಿಮಿನಲ್ ಕೇಸ್ ಹಾಕುತ್ತಿಲ್ಲ. ರಾಜ್ಯ ಸರ್ಕಾರ ಏನೂ ಮಾಡದ ಕಾರಣ ಇಡಿ ತನಿಖೆ ಮಾಡಬೇಕಾಯಿತು. ರಾಜ್ಯದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಮ್ಮಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
------------ವಾಲ್ಮೀಕಿ ಹಣ ಅವರಪ್ಪನ ಮನೆ ಹಣವಾ?
ರಾಜ್ಯದಲ್ಲಿ ಚುನಾವಣೆ ಯಾವಾಗ ಬರುತ್ತದೋ ಗೊತ್ತಿಲ್ಲ. ರಾಜ್ಯ ಸರ್ಕಾರದ ಸ್ಥಿತಿ ಹೆಬ್ಬಾವು ಸುತ್ತಿಕೊಂಡಂತೆ ಆಗಿದೆ. ಎಲ್ಲಾ ಕಡೆಯಿಂದಲೂ ಅವರನ್ನು ಸುತ್ತಿಕೊಳ್ಳುತ್ತಿದೆ. ವಾಲ್ಮೀಕಿ ಹಗರಣದ ನೂರಾರು ಕೋಟಿ ಅದು ಅವರ ಅಪ್ಪನ ಹಣವಾ? ಅದು ಬಡವರ ಹಣರೀ. ಎಸ್ಸಿ ಎಸ್ಟಿ, ಮುಸ್ಲಿಮರ ಹೀರೋಗಳು ಕಾಂಗ್ರೆಸ್ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಇವರು ಅವರದ್ದೇ ಹಣ ತಿಂದರು. ಸಿಎಂ ಸಿದ್ರಾಮಣ್ಣ ಹಿಂದುಳಿದ ವರ್ಗದ ಮನುಷ್ಯನಾಗಿ ಈ ಕೆಲಸ ಮಾಡಬೇಕಿತ್ತಾ? ಬೇರೆಯದ್ದು ತಿನ್ನಬೇಕಿತ್ತು. ನೀವು ತಪ್ಪು ಮಾಡಿಲ್ಲವಾದರೆ ಸಿಬಿಐಗೆ ಕೊಡಿ ಎಂದು ಸಿಎಂಗೆ ಸವಾಲು ಹಾಕಿದರು.
ಕಾಂಗ್ರೆಸ್‌ನಲ್ಲಿ ಹಗರಣಗಳ ಸರಮಾಲೆಯೇ ಇದೆ. ದಲಿತರು, ಅಲ್ಪಸಂಖ್ಯಾತರ ಹೀರೋಗಳು ಕಾಂಗ್ರೆಸ್‌ನವರು ಎಂದು ಹೇಳುತ್ತಾರೆ. ಆದರೆ ಅಹಿಂದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಏನು ನೈತಿಕತೆ ಇದೆ? ದಲಿತರು, ಮೈನಾರಿಟಿಗಳ ಹಣವನ್ನೂ ನುಂಗಿದ್ದಾರೆ. ನಾಚಿಕೆ ಬರಲ್ವಾ ಇವರಿಗೆ? ಸಿದ್ರಾಮಣ್ಣ ಹಿಂದೆ ಜನತಾ ಪರಿವಾರದಲ್ಲಿದ್ದ. ಈಗ ಕಾಂಗ್ರೆಸ್‌ಗೆ ಬಂದು ಅಹಿಂದ ಹೀರೋ ಆಗಿದ್ದಾರೆ. ಇವರು ಮಾಡೋದು ಸರಿಯಾ? ಜನರಿಗೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.