ಕನ್ನಡಪ್ರಭ ವಾರ್ತೆ ಮೈಸೂರು
ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಪರ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ವರುಣ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಮತಯಾಚಿಸಿದರು.ಈ ವೇಳೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕಳೆದ ಸರ್ಕಾರದಲ್ಲಿ ಶಾಲಾ ಕಾಲೇಜುಗಳಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿದ್ದರು. ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ಶಾಲಾ ಕಾಲೇಜು ಶಿಕ್ಷಕರಿಗೆ ಸರ್ಕಾರದಿಂದ ಅನೇಕ ಸೌಲಭ್ಯ ಒದಗಿಸುವಲ್ಲಿ ನಮ್ಮ ಸರ್ಕಾರ ಪ್ರಮುಖ ಪಾತ್ರವಹಿಸಿದೆ ಎಂದರು.
ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆ ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದು, ಅಭಿವೃದ್ಧಿಗೆ ಶಿಕ್ಷಣಕ್ಕೆ ಆದ್ಯತೆ ನೀಡದೇ ಶಿಕ್ಷಣ ಕ್ಷೇತ್ರಕ್ಕೆ ವಂಚಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ತಿಳಿಸಿದರು.ಶಿಕ್ಷಕರ ಹಕ್ಕುಗಳಿಗೆ, ಶ್ರೇಯೋಭಿವೃದ್ದಿಗೆ ಬಿಜೆಪಿ ಬೆಂಬಲ ನೀಡಿದಷ್ಟು ಕಾಂಗ್ರೆಸ್ ನೀಡಿಲ್ಲ. ಕಳೆದ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಸಮ್ಮಿಶ್ರ ಸರ್ಕಾರದಲ್ಲಿ 56 ಸಾವಿರ ಮಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದೇವೆ. ಅಲ್ಲದೇ ಶಿಕ್ಷಣ ಕ್ಷೇತ್ರಕ್ಕೆ 2005-06ರಲ್ಲಿ ಬಜೆಟ್ ನಲ್ಲಿ 4,800 ಕೋಟಿ ಅನುದಾನ ಮೀಸಲಿಡಲಾಗಿತ್ತು. ನಮ್ಮನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 18,666 ಕೋಟಿ ರೂ.ಗಳನ್ನು ಶಿಕ್ಷಕರ ಕ್ಷೇತ್ರಕ್ಕೆ ಅನುದಾನ ನೀಡುವುದಲ್ಲದೇ, ಶಿಕ್ಷಕರಿಗೆ ವೈದ್ಯಕೀಯ ಭತ್ಯೆ, ರಾಜ್ಯದಲ್ಲಿ 1,000 ಪ್ರೌಢಶಾಲೆಗಳ ಅನುಷ್ಠಾನ, 530 ಪದವಿ ಪೂರ್ವ ಕಾಲೇಜುಗಳು ಸೇರಿದಂತೆ 2000 ಪದವಿ ಪೂರ್ವ ಉಪನ್ಯಾಸಕರ ನೇಮಕ ಇದೆಲ್ಲವೂ ನಮ್ಮ ಬಿಜೆಪಿಸರ್ಕಾರದಲ್ಲಿ ಶಿಕ್ಷಕರ ಹಿತಕಾಪಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವುದಾಗಿ ಅವರು ಹೇಳಿದರು.
ಇತ್ತೀಚಿಗೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರತಿದಿನವು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಸಚಿವ ನಾಗೇಂದ್ರ ಅವರ ಭ್ರಷ್ಟಾಚಾರ ಆರೋಪ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದ್ದು, ಭ್ರಷ್ಟಾಚಾರ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಅಧಿಕ್ಷಕ ಚಂದ್ರಶೇಖರ್ ಅವರ ನಿಧನ ಆಘಾತಕಾರಿ. ಈ ಘಟನೆಯಿಂದ ರಾಜ್ಯದ ಅಧಿಕಾರಿ ವರ್ಗಕ್ಕೆ ಮತ್ತು ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.ಮುಂದಿನ ದಿನಗಳಲ್ಲಿ ನಮ್ಮ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಶಿಕ್ಷಕರ ಕ್ಷೇತ್ರಕ್ಕೆ ದೊರೆಯಲಿದೆ ಎಂದರು.
ಈ ವೇಳೆ ಮಧು, ನಾರಾಯಣಚಾರಿ, ವಿನೋದ, ಶಿವಕುಮಾರ್, ಲಕ್ಷ್ಮಣ್, ಲಚ್ಚಿ ಮೊದಲಾದವರು ಇದ್ದರು.