ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಇಲ್ಲಿಗೆ ಮೋದಿ ಅವರನ್ನು ಕರೆಸದೆ ಈ ಬಾರಿ ಭಾರಿ ಅಂತರದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿ ತೋರಿಸಬೇಕು ಎಂಬ ಹಠ ನಾಯಕರಲ್ಲಿ ತಲೆದೋರಿದೆ. ಈ ಹೊಸ ಪ್ರಯೋಗ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಭದ್ರಕೋಟೆ ಇರುವ ಕಡೆಗಳಲ್ಲಿ ಮೋದಿ ಅವರನ್ನು ಕರೆಸದೆ ಚುನಾವಣೆ ಗೆಲ್ಲುವ ಆಲೋಚನೆ ನಾಯಕರಲ್ಲಿ ಮೂಡಿದೆ.
ಇನ್ನೊಂದು ಮಾಹಿತಿ ಪ್ರಕಾರ, ದ.ಕ.ದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರಿಗೆ ಟಿಕೆಟ್ ನೀಡಲು ಸಾಧ್ಯವಾಗಿಲ್ಲ. ಜನರ ವಿರೋಧ ಕಾರಣಕ್ಕೆ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಇದೇ ರೀತಿ ಉಡುಪಿಯಲ್ಲೂ ಹಾಲಿ ಸಂಸದರ ಬದಲು ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಉತ್ತರ ಕನ್ನಡದಲ್ಲಿ ಹಾಲಿ ಸಂದರನ್ನು ಬದಲಿಸಲು ನಾಯಕರು ತೀರ್ಮಾನಿಸಿದ್ದಾರೆ. ಅಲ್ಲಿ ಟಿಕೆಟ್ ಯಾರಿಗೆ ಎನ್ನುವುದೇ ಅಂತಿಮವಾಗಿಲ್ಲ. ಇವೆಲ್ಲವೂ ಕರಾವಳಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನೆಯಾಗಿದ್ದು, ಇದು ಕೂಡ ಮೋದಿ ಕಾರ್ಯಕ್ರಮ ಕರಾವಳಿಯಿಂದ ದೂರವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.ಆದರೆ ಕೊನೆಕ್ಷಣದಲ್ಲಿ ಪರಿಸ್ಥಿತಿಯನ್ನು ಅವಲಂಬಿಸಿ ಮೋದಿ ಸಮಾವೇಶ ಆಯೋಜನೆಗೊಳ್ಳುವುದನ್ನು ತಳ್ಳಿ ಹಾಕುವಂತಿಲ್ಲ. ಮೋದಿ ಬದಲು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದ ಘಟನಾನುಘಟಿಗಳನ್ನು ಕರೆಸುವ ಸಾಧ್ಯತೆಯನ್ನು ಜಿಲ್ಲೆಯ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
ಲೋಕಸಭೆ ಹಾಗೂ ಅಸೆಂಬ್ಲಿ ಚುನಾವಣೆಗೆ ಕರಾವಳಿಯಲ್ಲಿ ಇದುವರೆಗೆ ನರೇಂದ್ರ ಮೋದಿ ಪ್ರಚಾರ ಭಾಷಣ ಮಾಡುವುದನ್ನು ತಪ್ಪಿಸಿಲ್ಲ. 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನೆಹರೂ ಮೈದಾನದಲ್ಲಿ ಅಸೆಂಬ್ಲಿ ಚುನಾವಣೆಗೆ ಭಾಷಣ ಮಾಡಿದ್ದರು. 2014ರ ಫೆಬ್ರವರಿಯಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ಭಾರತ ಗೆಲ್ಲಿಸಿ ಸಮಾವೇಶ, 2018ರಲ್ಲೂ ಅಸೆಂಬ್ಲಿ ಚುನಾವಣಾ ಭಾಷಣ ಮಾಡಿದ್ದರು. 2019ರ ಏಪ್ರಿಲ್‌ನಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಭಾಗವಹಿಸಿದ್ದರು. 2023ರಲ್ಲೂ ಮೂಲ್ಕಿಯ ಮೈದಾನ ಹಾಗೂ ಉಡುಪಿಯಲ್ಲಿ ಚುನಾವಣಾ ರ್‍ಯಾಲಿ ನಡೆಸಿದ್ದರು.