ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ : ಮಾಜಿ ಸಂಸದ ವಿ.ಎಸ್. ಉಗ್ರಪ್ಪ

KannadaprabhaNewsNetwork |  
Published : Jan 06, 2024, 02:00 AM ISTUpdated : Jan 06, 2024, 04:01 PM IST
ಬಳ್ಳಾರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರು ಬಿಜೆಪಿಯ ಶ್ರೀಕಾಂತ ಪೂಜಾರಿ ಪರ ಹೋರಾಟವನ್ನು ಖಂಡಿಸಿದರು.  | Kannada Prabha

ಸಾರಾಂಶ

ಸಂಸತ್ ದಾಳಿ ನಡೆದು 23 ದಿನಗಳಾದರೂ ಪಾಸ್ ನೀಡಿದವರ ವಿರುದ್ಧ ಕ್ರಮ ವಹಿಸಲಿಲ್ಲ. ಬೇಹುಗಾರಿಕೆ ಇಲಾಖೆ ಸೇರಿದಂತೆ ಸಂಬಂಧಿಸಿದ ವಿರುದ್ಧ ಯಾವುದೇ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಲಿಲ್ಲ.

ಬಳ್ಳಾರಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬೆಂಬಲಿಗ ಎನ್ನಲಾದ ರೌಡಿಶೀಟರ್ ಶ್ರೀಕಾಂತ ಪೂಜಾರಿ ಪರ ಹೋರಾಟ ನಡೆಸುತ್ತಿರುವ ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈವಿಷಯ ಪ್ರಸ್ತಾಪಿಸಿದ ಅವರು, ಶ್ರೀಕಾಂತ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ ಮಾರಾಟ 9 ಪ್ರಕರಣಗಳು, ದೊಂಬಿ 3 ಪ್ರಕರಣಗಳು ಸೇರಿದಂತೆ ಹಲವು ಕೇಸ್‌ಗಳು ದಾಖಲಾಗಿವೆ. ಇಂತಹ ರೌಡಿಶೀಟರ್ ಪರವಾಗಿ ಬಿಜೆಪಿಯವರು ನಾಚಿಕೆ ಬಿಟ್ಟು ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಇವರಿಗೆ ನಿಜಕ್ಕೂ ನೈತಿಕತೆ ಹಾಗೂ ರಾಜಕೀಯ ಬದ್ಧತೆ ಇದೆಯೇ? ರೌಡಿಶೀಟರ್‌ ಕರಸೇವಕನೇ? ರಾಮಭಕ್ತನಾಗಲು ರೌಡಿಶೀಟರ್‌ಗೆ ಸಾಧ್ಯವೇ? ಎಂದು ಪ್ರಶ್ನಿಸಿದರು.

ಸಂಸತ್ ದಾಳಿ ನಡೆದು 23 ದಿನಗಳಾದರೂ ಪಾಸ್ ನೀಡಿದವರ ವಿರುದ್ಧ ಕ್ರಮ ವಹಿಸಲಿಲ್ಲ. ಬೇಹುಗಾರಿಕೆ ಇಲಾಖೆ ಸೇರಿದಂತೆ ಸಂಬಂಧಿಸಿದ ವಿರುದ್ಧ ಯಾವುದೇ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಆದರೆ, ಒಬ್ಬ ರೌಡಿಶೀಟರ್‌ನನ್ನು ಬಂಧಿಸಿದ್ದ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಾರೆ ಎಂದಾದರೆ ಇವರಿಗೆ ಯಾವ ನೈತಿಕತೆ ಉಳಿದಿದೆ? ಗೂಂಡಾಗಳನ್ನು ರಕ್ಷಣೆ ಮಾಡುವ ಸಂಘಟನೆಯಾಗಿ ಬಿಜೆಪಿ ಪರಿವರ್ತನೆಯಾಗಿದ್ದು, ರಾಷ್ಟ್ರ, ರಾಜ್ಯಕ್ಕೆ ಮಾರಕವಾಗುತ್ತಿದೆ. ನೈತಿಕತೆ, ಬದ್ಧತೆ ಇದ್ದರೆ ರೌಡಿಶೀಟರ್ ಪರ ಪ್ರತಿಭಟನೆ ಮಾಡಿದ್ದಕ್ಕೆ ಬಿಜೆಪಿಯವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

 ಚೆಲ್ಲಾಟ ಸರಿಯಲ್ಲ: ಕೆಪಿಎಸ್‌ಸಿಯ ಕೆಲ ಸದಸ್ಯರು ಉದ್ಯೋಗ ಆಕಾಂಕ್ಷಿಗಳ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಸುಮಾರು ಮೂರು ಸಾವಿರ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ನಿಯಮಗಳ ಪ್ರಕಾರ ನಡೆದುಕೊಳ್ಳುವುದು ಬಿಟ್ಟು ಸಭೆಗೆ ಗೈರಾಗುವ ಮೂಲಕ ಕೆಪಿಎಸ್‌ಸಿಯ ಗೌರವಕ್ಕೆ ಧಕ್ಕೆ ತರುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಕೂಡಲೇ ಸದಸ್ಯರು ಮೊಂಡತನವನ್ನು ಬಿಡಬೇಕು ಎಂದರು.

ಪಕ್ಷಿಗಳಿಗೆ ನೀರಿಲ್ಲ: ನಾನು ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಭಾಗದಲ್ಲಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಾಲ್ಕೈದು ತಾಸು ಸಂಚಾರ ಮಾಡಿದೆ. ಅಲ್ಲಿ ಪಕ್ಷಿಗಳಿಗೆ ಅವಶ್ಯವಿರುವ ನೀರಿನ ಸೌಕರ್ಯವಿಲ್ಲ. ಗಿಡಮರಗಳು ಬೆಳೆದಿಲ್ಲ. ಹೊಂಗೆ, ಬೇವು, ಹುಣಸೆ ಸೇರಿದಂತೆ ಸಾಮಾನ್ಯವಾಗಿ ಕಂಡುಬರುವ ಮರಗಳು ಅಲ್ಲಿಲ್ಲ. ಅರಣ್ಯ ಇಲಾಖೆಯ ಪ್ರಗತಿ ಬರೀ ಪೇಪರ್‌ನಲ್ಲಿ ಕಂಡುಬರುತ್ತಿದೆಯೇ ವಿನಾ, ಕಾರ್ಯರೂಪದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.

 ಹೀಗಾಗಿ, ಅರಣ್ಯ ಪ್ರದೇಶ ಅಭಿವೃದ್ಧಿ ಉಳಿವಿಗಾಗಿ ಸರ್ಕಾರ ಮುಂದಾಗಬೇಕು. ಕಾಡುಪ್ರಾಣಿಗಳಿಗೆ ಅಗತ್ಯವಿರುವ ಆಹಾರ, ನೀರು ಪೂರೈಸಬೇಕೆಂದು ಒತ್ತಾಯಿಸಿದರಲ್ಲದೆ, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವರ ಜತೆ ಮಾತನಾಡಿ, ಕ್ರಮ ವಹಿಸಲಾಗುವುದು ಎಂದರು. ಪಕ್ಷದ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಲ್. ಮಾರೆಣ್ಣ, ವೆಂಕಟೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ