ಹೆಬ್ಬಾರ್ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ: ಹೆಬ್ಬಾರ್

KannadaprabhaNewsNetwork | Published : Jun 20, 2024 1:04 AM

ಸಾರಾಂಶ

ಶಿವರಾಮ ಹೆಬ್ಬಾರ್ ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಿ. ಪಕ್ಷ ವಿರೋಧಿ ಕೆಲಸವನ್ನು ಶಿವರಾಮ ಹೆಬ್ಬಾರ್ ಮಾಡಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡಲಿ.

ಶಿರಸಿ: ಯಲ್ಲಾಪುರ ವಿಧಾನಸಭಾ ಶಾಸಕ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ಶಕ್ತಿ, ಕಾಂಗ್ರೆಸ್‌ನಿಂದ ೨ ಬಾರಿ, ಬಿಜೆಪಿಯಿಂದ ೨ ಬಾರಿ ಶಾಸಕರಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ಮುಖಂಡರಿಗಿಲ್ಲ. ಇನ್ನೊಮ್ಮೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೆಬ್ಬಾರ್ ಅಭಿಮಾನಿ ಬಳಗದ ದ್ಯಾಮಣ್ಣ ದೊಡ್ಮನಿ ಎಚ್ಚರಿಕೆ ನೀಡಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವರಾಮ ಹೆಬ್ಬಾರ್ ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಿ. ಪಕ್ಷ ವಿರೋಧಿ ಕೆಲಸವನ್ನು ಶಿವರಾಮ ಹೆಬ್ಬಾರ್ ಮಾಡಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡಲಿ. ಅದನ್ನು ಬಿಟ್ಟು ರಾಜೀನಾಮೆ ಕೇಳುವುದನ್ನು ಬಿಡಲಿ ಎಂದು ಒತ್ತಾಯಿಸಿದ ಅವರು, ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದಿರುವುದರಿಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವುದು. ಶಾಂತಾರಾಮ ಸಿದ್ದಿ ವಿಧಾನಪರಿಷತ್ ಸದಸ್ಯರಾಗಿರುವುದು ಎಂಬುದನ್ನು ಬಿಜೆಪಿಯ ಮುಖಂಡರು ಅರ್ಥ ಮಾಡಿಕೊಳ್ಳಲಿ. ಬಿಜೆಪಿ ಸರ್ಕಾರ ರಚನೆಯಾಗಲು ಶಿವರಾಮ ಹೆಬ್ಬಾರ್ ಸೇರಿದಂತೆ ೧೨ ಶಾಸಕರ ತ್ಯಾಗವಿದೆ ಎಂದರು.ದೇಶಕ್ಕೆ ನರೇಂದ್ರ ಮೋದಿ ಬೇಕು. ಯಲ್ಲಾಪುರಕ್ಕೆ ಶಿವರಾಮ ಹೆಬ್ಬಾರ್ ಬೇಡ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಅವರನ್ನು ಸೋಲಿಸಲು ಬಿಜೆಪಿ ಮುಖಂಡರು ಸಾಕಷ್ಟು ಪ್ರಯತ್ನಿಸಿದರು. ಯಲ್ಲಾಪುರ, ಮುಂಡಗೋಡ ಮತ್ತು ಬನವಾಸಿ ಭಾಗದ ಜನರು ಹೆಬ್ಬಾರ್ ಅವರ ಕೈ ಹಿಡಿದು ಗೆಲ್ಲಿಸಿದ್ದಾರೆ. ಪಕ್ಷದಲ್ಲಿದ್ದು ಮೋಸ ಮಾಡುವವರು ಹೆಬ್ಬಾರ್ ಪರಿವಾರದವರಲ್ಲ. ಶಿವರಾಮ ಹೆಬ್ಬಾರ್ ಅವರ ರಾಜೀನಾಮೆ ಕೇಳುವ ನೈತಿಕತೆ ಶಿರಸಿ, ಮುಂಡಗೋಡ ಹಾಗೂ ಯಲ್ಲಾಪುರ ಮಂಡಲಾಧ್ಯಕ್ಷರು ಉಳಿಸಿಕೊಂಡಿಲ್ಲ ಎಂದು ತಿರುಗೇಟು ನೀಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಗೌಡರ್ ಮಾತನಾಡಿ, ಪರಿಷತ್ತು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ ಹೆಬ್ಬಾರ್, ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ ಅವರನ್ನು ಗೆಲ್ಲಿಸಿದ್ದಾರೆ. ಶಿವರಾಮ ಹೆಬ್ಬಾರ್ ರಾಜೀನಾಮೆ ಕೇಳಲು ನೈತಿಕತೆಯಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಮಾಡಿದವರ ಪಟ್ಟಿಯನ್ನು ರಾಜ್ಯ, ಜಿಲ್ಲಾ ನಾಯಕರಿಗೆ ನೀಡಿದ್ದಾರೆ. ಅಂತಹ ವ್ಯಕ್ತಿಗಳಿಗೆ ಪಕ್ಷದ ಜವಾಬ್ದಾರಿ ನೀಡಿದ್ದಾರೆ. ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಬನವಾಸಿ ಭಾಗದ ಮುಖಂಡ ಪ್ರಕಾಶ ಬಂಗ್ಲೆ ಮಾತನಾಡಿ, ಬನವಾಸಿ ಭಾಗದ ಅಭಿವೃದ್ಧಿಗೆ ಶಿವರಾಮ ಹೆಬ್ಬಾರ್ ಪ್ರಯತ್ನ ಸಾಕಷ್ಟಿದ್ದು, ಬನವಾಸಿ ಮಧುಕೇಶ್ವರ ದೇವಾಲಯ ನೂತನ ರಥ ನಿರ್ಮಾಣಕ್ಕೆ ಸರ್ಕಾರದಿಂದ ₹೩ ಕೋಟಿ ಅನುದಾನ ಒದಗಿಸಿದ್ದಾರೆ. ಕೆರೆ ತುಂಬಿಸುವ ಯೋಜನೆಗೆ ಕೋಟ್ಯಂತರ ರು. ಅನುದಾನ ನೀಡಿದ್ದಾರೆ. ಮಧುಕೇಶ್ವರ ದೇವರು ಶಿವರಾಮ ಹೆಬ್ಬಾರ್ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಶ್ರೀಧರ ಗೌಡ, ವಿನಯ ಗೌಡ ಭಾಶಿ, ರಾಜು ಗೌಡ ಖಂಡ್ರಾಜಿ, ಜಿ.ವಿ. ಭಟ್ಟ, ರಘು ನಾಯ್ಕ ಗುಯಡ್ನಾಪುರ, ವಿ.ಎಸ್. ಗಂಗಾಧರ, ಮಂಜು ಮಧುರವಳ್ಳಿ, ಸುಭಾಸ್ ಮಡಿವಾಳ, ಅಶೋಕ ನಾಯ್ಕ, ಸುಧಾಕರ ನಾಯ್ಕ, ಅರವಿಂದ ತೆಲಗುಂದ, ಕೃಷ್ಣ ಕೊಡಿಯಾ, ಮಂಜುನಾಥ ನಾಯ್ಕ ಮತ್ತಿತರರು ಇದ್ದರು.

Share this article