ಬಿಜೆಪಿಯವರಿಗೆ ಕೆಲಸವಿಲ್ಲ : ಭೋಸರಾಜು

KannadaprabhaNewsNetwork |  
Published : Jul 11, 2025, 11:48 PM IST
ಭೋಸರಾಜು | Kannada Prabha

ಸಾರಾಂಶ

ಬಿಜೆಪಿಯವರಿಗೆ ಕೆಲಸವಿಲ್ಲ. ರಾಜ್ಯದ ಅಭಿವೃದ್ಧಿ ಕುಂದುಕೊರತೆಗಳ ಬಗ್ಗೆ ಅವರು ಮಾತನಾಡಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿಯವರಿಗೆ ಕೆಲಸವಿಲ್ಲ . ರಾಜ್ಯದ ಅಭಿವೃದ್ಧಿ ಕುಂದುಕೊರತೆಗಳ ಬಗ್ಗೆ ಅವರು ಮಾತನಾಡಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಸಿಎಂ, ಡಿಸಿಎಂ ಬಗ್ಗೆ ಮಾತನಾಡುತ್ತಾರೆ ಎಂದು ಉಸ್ತುವಾರಿ ಸಚಿವ ಭೋಸರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ರಾಜ್ಯದಲ್ಲಿ ಹೇಳಿರುವುದನ್ನೇ ದೆಹಲಿಯಲ್ಲಿಯೂ ಹೇಳಿದ್ದಾರೆ. ಸಿಎಂ, ಡಿಸಿಎಂ ಇಬ್ಬರು ಕೇಂದ್ರ ಸಚಿವರನ್ನು ಭೇಟಿಯಾಗುವುದಕ್ಕೆ ಹೋಗಿದ್ದರು. ಅಲ್ಲಿ ಮಾಧ್ಯಮದವರು ಕೇಳಿರುವುದರಿಂದ ಮುಂದೆಯೂ ನಾನೇ ಸಿಎಂ ಎಂದಿದ್ದಾರೆ. ಕುರ್ಚಿ ಖಾಲಿ ಇಲ್ಲ ಅಂದಿದ್ದಾರೆ ಡಿಸಿಎಂ ಕೂಡ ಕುರ್ಚಿ ಖಾಲಿ ಎಂದಿದ್ದಾರೆ.

ಸರ್ಕಾರ ನಡೆಯುತ್ತಿದೆ, ಉತ್ತಮ ಆಡಳಿತ ನಡೆಯುತ್ತಿದೆ. ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ ಅಂತ ಇಬ್ಬರೂ ಹೇಳಿದ್ದಾರೆ. ಇದರಲ್ಲಿ ಅನುಮಾನ ಊಹೆ ಮಾಡುವಂತಹದ್ದು ಏನು ಇಲ್ಲ ಎಂದು ಹೇಳಿದರು.

ಬಿಜೆಪಿಯವರಿಗೆ ಸ್ವಲ್ಪವೂ ನಾಚಿಕೆ ಇಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿರುವ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನಾಚಿಕೆ ಮರ್ಯಾದೆ ಇಲ್ಲ.

ಹಿಂದಿನಿಂದಲೂ ಮೈಸೂರಿಗೆ ಹೋಗುವಷ್ಟರಲ್ಲಿ ಸಿಎಂ ರಾಜೀನಾಮೆ ನೀಡ್ತಾರೆ ಅಂದು ಹೇಳಿದ್ದರು. ಮೈಸೂರು ಪಬ್ಲಿಕ್ ಮೀಟಿಂಗ್ ಆದ ಕೂಡಲೇ ರಾಜೀನಾಮೆ ಎಂದು ಹೇಳಿದ್ದರು. ಬೆಳಗಾವಿ ಅಧಿವೇಶನದಲ್ಲಿ ಮಾಡ್ತಾರೆ ಎಂದು ಹೇಳಿದ್ದರು.

ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೀಗೆ ಮಾತನಾಡುವುದಕ್ಕೆ ಅವರಿಗೆ ನಾಚಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಅವರ ಪಾರ್ಟಿ ಪರಿಸ್ಥಿತಿ ಅವರಿಗೆ ಗೊತ್ತಿದೆಯಾ? ಎರಡು ವರ್ಷದಿಂದ ಅವರ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಿಕೊಳ್ಳಲಾಗಿಲ್ಲ. ರಾಜ್ಯದಲ್ಲಿ ಅಧ್ಯಕ್ಷರ ಸ್ಥಿತಿ ಏನಾಗುತ್ತೆ ಗೊತ್ತಿಲ್ಲ. ವಿಜಯೇಂದ್ರ ಆಗಲೇ ದೆಹಲಿಗೆ ಓಡಿಹೋಗಿದ್ದಾರೆ. ಅವರಿಗೆ ಗೊತ್ತಿಲ್ಲದಂತೆ ಕೆಲವರು ಕದ್ದು ದೆಹಲಿಗೆ ಹೋಗಿದ್ದಾರೆ ಎಂದರು.

PREV