ಕೆಂಪು ಕಲ್ಲು, ಮರಳು ಸಮಸ್ಯೆ ಪರಿಹಾರ ಆಗ್ರಹಿಸಿ ಮಂಗ್ಳೂರಲ್ಲಿ ಬಿಜೆಪಿ ದಿನಪೂರ್ತಿ ಬೃಹತ್‌ ಧರಣಿ

KannadaprabhaNewsNetwork |  
Published : Sep 17, 2025, 01:07 AM IST
ನಿರ್ಮಾಣ ಬಳಕೆಯ ಉಪಕರಣ ಪ್ರದರ್ಶಿಸಿ ಪ್ರತಿಭಟಿಸುತ್ತಿರುವ ಬಿಜೆಪಿ ಮುಖಂಡರು | Kannada Prabha

ಸಾರಾಂಶ

ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಎದುರು ಮಂಗಳವಾರ ದಿನಪೂರ್ತಿ ಬೃಹತ್‌ ಪ್ರತಿಭಟನಾ ಧರಣಿ ನಡೆಯಿತು.

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಎದುರು ಮಂಗಳವಾರ ದಿನಪೂರ್ತಿ ಬೃಹತ್‌ ಪ್ರತಿಭಟನಾ ಧರಣಿ ನಡೆಯಿತು.

ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಅಲ್ಲದೆ ಮಂಗಳೂರಿನಿಂದ ಬಿ.ಸಿ.ರೋಡ್‌ ಮೂಲಕ ಸುಳ್ಯಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.ಕೆಂಪು ಕಲ್ಲು, ಮರಳು, ಖಾಲಿ ಚಟ್ಟಿ, ಗಾರೆಗಳನ್ನು ಬಿಜೆಪಿ ಮುಖಂಡರು ಹಾಗೂ ಜನಪ್ರತಿನಿಧಿಗಳು ಪ್ರದರ್ಶಿಸುವ ಮೂಲಕ ಕೆಂಪು ಕಲ್ಲು, ಮರಳು ಸಮಸ್ಯೆ ಕೂಡಲೇ ಇತ್ಯರ್ಥಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರ, ಸ್ಪೀಕರ್‌, ಉಸ್ತುವಾರಿ ನೇರ ಹೊಣೆ: ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ಕರಾವಳಿ ಹಿಂದುತ್ವದ ಭದ್ರಕೋಟೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೆಂಪು ಕಲ್ಲು ಮತ್ತು ಮರಳಿನ ಕೃತಕ ಅಭಾವ ಸೃಷ್ಟಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಪೀಕರ್‌ಗೆ ಇಲ್ಲಿನ ಜ್ವಲಂತ ಸಮಸ್ಯೆ ಗೊತ್ತಿದ್ದರೂ ಸಮಸ್ಯೆಗೆ ಪರಿಹಾರ ಹುಡುಕು ಕೆಲಸ ಆಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಹಿತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಯು.ಟಿ.ಖಾದರ್‌ ನೇರ ಜವಾಬ್ದಾರಿ ಎಂದು ಅವರು ಆರೋಪಿಸಿದರು. ಪಾದಯಾತ್ರೆ ಎಚ್ಚರಿಕೆ:

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಕೆಂಪು ಕಲ್ಲು ಮತ್ತು ಮರಳಿನ ಸಮಸ್ಯೆಯಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಆಗಮಿಸಿದರೂ ಶಾಸಕರ ಸಭೆ ಕರೆದಿಲ್ಲ. ಹಾಗಾಗಿ ಮಂಗಳೂರಿನಿಂದ ಬಿ.ಸಿ.ರೋಡ್‌, ಸುಳ್ಯಕ್ಕೆ ಪಾದಯಾತ್ರೆ ನಡೆಸುವ ಎಚ್ಚರಿಕೆಯನ್ನು ನೀಡಿದರು. ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಮಾತನಾಡಿ, ಹಿಂದುತ್ವದ ಗಟ್ಟಿನೆಲ ಕರಾವಳಿಯಲ್ಲಿ ಕಾರ್ಯಕರ್ತರ ಕೊಲೆ, ಗೋಕಳ್ಳತನದಿಂದ ತೊಡಗಿ ಈಗ ಕೆಂಪು ಕಲ್ಲು, ಮರಳು ಕೊರತೆ ವರೆಗೆ ಸರ್ಕಾರದಿಂದ ಸಮಸ್ಯೆಗಳ ಸೃಷ್ಟಿಯಾಗುತ್ತಿದೆ. ಎರಡು ವಾರಗಳಲ್ಲಿ 250 ಪರವಾನಗಿ ನೀಡಿ ಮರಳು ಸಮಸ್ಯೆ ಇತ್ಯರ್ಥಗೊಂಡಿದೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಕರಾವಳಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಕೆಂಪು ಕಲ್ಲು, ಮರಳು ಕಟ್ಟಡ ಕಾಮಗಾರಿಗಳಿಗೆ ಸಿಗುತ್ತಿಲ್ಲ. ಇಲ್ಲಿ ಕೆಂಪು ಕಲ್ಲು ಬಳಸಿಯೇ ಕಾಮಗಾರಿ ನಡೆಸುವುದರಿಂದ ಈಗ ಕಾರ್ಮಿಕರೂ ಕೆಲಸ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಬಿಜೆಪಿ ನಿಯೋಗ ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಕಂಡಿಲ್ಲ ಎಂದರು.ಶಾಸಕರಾದ ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್ ಪೂಂಜಾ, ಭಾಗೀರಥಿ, ಕಿಶೋರ್‌ ಕುಮಾರ್‌ ಪುತ್ತೂರು, ಮಾಜಿ ಶಾಸಕರಾದ ಕ್ಯಾ.ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ಸಂಜಯ ಪ್ರಭು, ರಮೇಶ್‌ ಕಂಡೆಟ್ಟು, ಪೂರ್ಣಿಮಾ, ವಿಹಿಂಪ ಮುಖಂಡ ಪುರುಷೋತ್ತಮ, ಮತ್ತಿತರರಿದ್ದರು. ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಸ್ಪೀಕರ್‌ ವಿರುದ್ಧ ಘೋಷಣೆ ಕೂಗಿದರು.

ಸಂಜೆ ವೇಳೆ ರಸ್ತೆ ತಡೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಅದಕ್ಕೂ ಮೊದಲೇ ಸಹಾಯಕ ಕಮಿಷನರ್‌ ಅವರು ಆಗಮಿಸಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ