ಕನ್ನಡಪ್ರಭವಾರ್ತೆ ವಿರಾಜಪೇಟೆ
ಬಿಜೆಪಿ ವಿರಾಜಪೇಟೆ ಮಂಡಲದ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಘೋಷವಾಕ್ಯದಡಿಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಮಾನವ ಸರಪಳಿ ಮೂಲಕ ಪ್ರಕರಣದ ರೂವಾರಿಗಳ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಖಂಡನೆ ಹೊರಹಾಕಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು - ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವಂತೆ ಷಡ್ಯಂತ್ರ ರಚಿಸಿ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಪಮಾನ ಮಾಡುವ ರೀತಿಯಲ್ಲಿ ಕಾಣದ ಕೈಗಳು ಪ್ರತಿನಿಧಿಸುತ್ತಿದೆ. ಶ್ರದ್ಧಾ ಕೇಂದ್ರಗಳ ಬಗ್ಗೆ ಅಪಪ್ರಚಾರ ಮಾಡಿರುವ ವ್ಯಕ್ತಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡುತ್ತೇನೆ. ಧರ್ಮ ಕೇಂದ್ರಗಳ ಮೇಲೆ ಅಪಪ್ರಚಾರಗಳು ನಡೆಯುವ ಸಂದರ್ಭದಲ್ಲಿ ಎಲ್ಲ ಹಿಂದೂ ಬಾಂಧವರು ಒಂದಾಗಿ ಹೋರಾಟಕ್ಕೆ ಸಿದ್ಧರಾಗ ಬೇಕು. ಧರ್ಮಕೇಂದ್ರಗಳ ಉಳಿವಿಗಾಗಿ ಸ್ಥಿರ ನೆಲೆಗಾಗಿ ಹೋರಾಟಗಳು ಮುಖ್ಯ ಎಂದರು. ಅಪಪ್ರಚಾರದಲ್ಲಿ ಅಂತರ್ ರಾಜ್ಯಗಳ ಕೈವಾಡವಿದೆ ಎಂಬ ಸಂಶಯ ವ್ಯಕ್ತವಾಗುತ್ತಿವೆ. ಈ ಹಿನ್ನಲೆಯಲ್ಲಿ ಎಸ್. ಐ. ಟಿ. ತನಿಖಾ ಸಂಸ್ಥೆಯು ಪಾರದರ್ಶಕವಾಗಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಸತ್ಯ ಹೊರಬರುವಂತೆ ತನಿಖೆ ನಡೆಸುತ್ತದೆ ಎಂಬ ಧೃಡ ವಿಶ್ವಾಸ ನಮಗಿದೆ ಎಂದು ಹೇಳಿದರು.ಧರ್ಮದ ಭಾವನೆಗಳಿಗೆ ಧಕ್ಕೆಯಾಗಿರುವ ವಿಷಯ:
ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಾವಿರಾರು ವರ್ಷಗಳ ಪೌರಾಣಿಕ ಹಿನ್ನಲೆಯಿಂದ ನಮ್ಮ ಧಾರ್ಮಿಕ ಕೇಂದ್ರಗಳು ಸ್ಥಾಪನೆಗೊಂಡಿದೆ. ಸುಜಾತ ಭಟ್, ಸಮೀರ್, ಗಿರೀಶ್ ಮಟ್ಟಣ್ಣನವರ್, ಹೀಗೆ ಹಲವರು ಧಾರ್ಮಿಕ ಕೇಂದ್ರಗಳ ಬಗ್ಗೆ ಅರಿಯದೆ ಮಾಡಿರುವ ಆರೋಪಗಳು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿರುವ ವಿಷಯ. ಧರ್ಮಸ್ಥಳವು ಧರ್ಮದ ಸಂಸ್ಥಾಪನೆಗೆ ರಚನೆಯಾಗಿದೆ. ಲಕ್ಷಾಂತರ ಸಂಖ್ಯೆಗಳಲ್ಲಿ ತನ್ನ ಭಕ್ತರನ್ನು ಹೊಂದಿದೆ. ಧರ್ಮಸ್ಥಳವು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಧರ್ಮಗಳ ಆಚರಣೆಗಳಿಗೆ ಸಹಾಯ ಧನವನ್ನು ನೀಡುತ್ತಾ ಜನಪರ ಕಾಳಜಿಯೊಂದಿಗೆ ಸಹಸ್ರ ಸಂಖ್ಯೆಯ ಮನೆಗಳಿಗೆ ದಾರಿದೀಪವಾಗಿದೆ. ಆದರೆ ಇಂತಹ ಕೇಂದ್ರದ ಮೇಲೆ ಅಪಪ್ರಚಾರದಿಂದ ನೂರಾರು ಸಂಖ್ಯೆಯಲ್ಲಿ ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಬಿಂಬಿಸಿಕೊಂಡು ಎಸ್.ಐ.ಟಿ ತನಿಖಾ ಸಂಸ್ಥೆಯನ್ನು ದಿಕ್ಕುತಪ್ಪಿಸುವ ಪ್ರಯತ್ನವಾಗಿದೆ. ಈ ಘಟನೆಯನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ಸರ್ಕಾರ ಎಂದು ಮತ್ತೋಮ್ಮೆ ಸಾಬೀತುಪಡಿಸಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಧರ್ಮದ ವಿರುದ್ಧ ಅಪಪ್ರಚಾರಕ್ಕೆ ಹಿಂದಿರುವ ದುಷ್ಟ ಶಕ್ತಿಗಳಿಗೆ ಪರೋಕ್ಷವಾಗಿ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿದರು. ಅಪಪ್ರಚಾರ ಮಾಡಲು ರಾಜ್ಯದಲ್ಲೆ ದೊಡ್ಡ ಮಟ್ಟದಲ್ಲಿ ಸಂಚು ರೂಪಿತವಾಗುತ್ತಿದೆ. ಹಿಂದೂ ಬಾಂಧವರು ಎಚ್ಚೆತ್ತುಕೊಳ್ಳಬೇಕು. ಧರ್ಮದ ಉಳಿವಿಗಾಗಿ ನಮ್ಮ ಹೋರಾಟವಾಗಬೇಕು. ಹಿಂದೂ ಧರ್ಮ ಕೇಂದ್ರಗಳನ್ನು ಉಳಿಸುವ ಮಹತ್ತರವಾದ ಹೋರಾಟಕ್ಕೆ ಸರ್ವರು ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.ಪ್ರತಿಭಟನೆ ಉದ್ದೇಶಿಸಿ ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಮತ್ತು ಕಾಂತಿ ಸತೀಶ್ ಮಾತನಾಡಿದರು. ಗಡಿಯಾರ ಕಂಬದ ಬಳಿಯಿಂದ ತಾಲೂಕು ಕಚೇರಿಯ ವರೆಗೆ ಜಾಥಾದಲ್ಲಿ ತೆರಳಿದ ಕಾರ್ಯಕರ್ತರು ತಹಸೀಲ್ದಾರ್ ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು, ಜಿಲ್ಲೆಯ ಪಕ್ಷದ ಪ್ರಮುಖರು ಸುವಿನ್ ಗಣಪತಿ, ನೆಲ್ಲಿರ ಚಲನ್ ಕುಮಾರ್, ಶಶಿ ಸುಬ್ರಮಣಿ, ರಘು ನಾಣಯ್ಯ ಮತ್ತು ವಿವಿಧ ಮಂಡಲಗಳ ಪ್ರಮುಖರು ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.